ಬಿಜೆಪಿಯ ಮಾತೃ ಸಂಘಟನೆಯಿಂದಲೇ ರಾಹುಲ್ ಯಾತ್ರೆಗೆ ನೈತಿಕ ಬೆಂಬಲ? ದೇಶದಲ್ಲಿನ ಬೆಲೆ ಏರಿಕೆಯ ಹೊಡೆತ, ನಿರುದ್ಯೋಗದ ಫಜೀತಿಯ ಸಂಧಿಕಾಲದಲ್ಲಿ ‘ಭಾರತ್ ಜೋಡೋ’ ಅರ್ಥಪೂರ್ಣವೇ? ಆರೆಸ್ಸೆಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ಅಭಿಪ್ರಾಯವನ್ನು ಕಾಂಗ್ರೆಸ್ ಸ್ವಾಗತಿಸಿತೇ..!?
ಬೆಂಗಳೂರು: ಕಾಂಗ್ರೆಸ್ ಆಯೋಜಿಸಿರುವ ‘ಭಾರತ್ ಜೋಡೋ ಯಾತ್ರೆ’ಗೆ ಆರೆಸ್ಸೆಸ್ ಸಹಮತ ಇದೆಯೇ? ಇಂಥದ್ದೊಂದು ವ್ಯಾಖ್ಯಾನ ರಾಜಕೀಯ ಪಂಡಿತರದ್ದು. ಸೈದ್ಧಾಂತಿಕ ವಿಚಾರದಲ್ಲಿ ಬಿಜೆಪಿಯನ್ನು ಸಮರ್ಥಿಸಿಕೊಳ್ಳುತ್ತಾ ಬಂದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವು ಈ ಬಾರಿ ದೇಶದಲ್ಲಿನ ಬಡತನ, ನಿರುದ್ಯೋಗ ವಿಚಾರದಲ್ಲಿ ಆಡಳಿತಾರೂಢ ಬಿಜೆಪಿಯ ಕಿವಿ ಹಿಂಡಿದೆ ಎಂಬುದು ಹಿರಿಯ ರಾಜಕೀಯ ವಿಶ್ಲೇಷಕರೂ ಆದ ಮಾಜಿ ಶಾಸಕ ರಮೇಶ್ ಬಾಬು ಅವರ ಅಭಿಪ್ರಾಯ. ಭಾರತ ಎದುರಿಸುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಹುಲ್ ಗಾಂಧಿ ಆಯೋಜಿಸಿರುವ ಭಾರತ್ ಜೋಡೋ ಯಾತ್ರೆ ಬಗ್ಗೆ ಆರೆಸ್ಸೆಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ತಮ್ಮದೇ ಆದ ಅಭಿಪ್ರಾಯ ಮೂಲಕ ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂಬುದು ರಮೇಶ್ ಬಾಬು ಅವರ ವಿಶ್ಲೇಷಣೆ.
ಪ್ರದೇಶ ಕಾಂಗ್ರೆಸ್ ಮಾಧ್ಯಮ ವಿಭಾಗದ ಉಪಾಧ್ಯಕ್ಷರೂ ಆಗಿರುವ ರಮೇಶ್ ಬಾಬು ಅವರು, ಆರೆಸ್ಸೆಸ್ ಧುರೀಣರ ಅಭಿಪ್ರಾಯ ಆಧರಿಸಿ ಬಿಡುಗಡೆ ಮಾಡುರುವ ಮಾಧ್ಯಮ ಹೇಳಿಕೆ ಗಮನಸೆಳೆದಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಶನಿವಾರ ಸ್ವದೇಶಿ ಜಾಗರಣಾ ಮಂಚ್ ಕಾರ್ಯಕ್ರಮದಲ್ಲಿ ದೇಶದ ಬಡತನ ಮತ್ತು ಅಸಮಾನತೆಯ ಕುರಿತು ಅಂಕಿ ಅಂಶಗಳ ಆಧಾರದ ಮೇಲೆ ಮಾತನಾಡಿ, ಪರೋಕ್ಷವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿನ ಭಾರತ್ ಜೋಡೋ ಪಾದಯಾತ್ರೆಯ ಉದ್ದೇಶವನ್ನು ಬೆಂಬಲಿಸಿದ್ದಾರೆ ಎಂದು ರಮೇಶ್ ಬಾಬು ಹೇಳಿದ್ದಾರೆ.
ಕಳೆದ ಎಂಟು ವರ್ಷಗಳಿಂದ ಭಾರತೀಯ ಜನತಾ ಪಕ್ಷವು ದೇಶದ ಆಡಳಿತವನ್ನು ನಡೆಸುತ್ತಿದೆ. ಜನಸಾಮಾನ್ಯರ ಬದುಕಿಗೆ ಆದ್ಯತೆ ನೀಡುವ ಬದಲು ಧರ್ಮ ಮತ್ತು ಜಾತಿಗಳ ಹೆಸರಿನಲ್ಲಿ ಭಾವನೆಗಳನ್ನು ಬಳಸಿಕೊಂಡು ಸಾಧನೆಯ ಪಟ್ಟ ಹಾಕಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ದೇಶದಲ್ಲಿ ಕೋಮು ಸಂಘರ್ಷ, ಅಶಾಂತಿ ಮತ್ತು ಅತೃಪ್ತಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಜನಸಾಮಾನ್ಯರ ಬದುಕು ಬೆಲೆಯೇರಿಕೆಯಿಂದ ಮತ್ತು ಉದ್ಯೋಗದ ಕೊರತೆಯಿಂದ ದುಸ್ತರವಾಗಿದೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ ಸುಮಾರು 20 ಕೋಟಿಗಿಂತಲೂ ಅಧಿಕ ಜನ ಬಡತನ ರೇಖೆಗಿಂತಲೂ ಕೆಳಗಿದ್ದಾರೆ. ಹೊಸಬಾಳೆರವರು ತಿಳಿಸಿರುವಂತೆ ಭಾರತದ ಸುಮಾರು 23 ಕೋಟಿಗೂ ಅಧಿಕ ಜನರ ದಿನದ ತಲಾ ಆದಾಯ 375 ರೂಪಾಯಿಗಳಿಗಿಂತ ಕಡಿಮೆ ಇದೆ. ಕೇವಲ ಪ್ರಚಾರದಲ್ಲೇ ಮುಳುಗಿರುವ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಕಿವಿ ಹಿಂಡುವ ಜೊತೆಗೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಪಾದಿಸುತ್ತಿರುವ ಅಂಕಿ ಅಂಶಗಳನ್ನು ಹೊಸಬಾಳೆ ಬೆಂಬಲಿಸಿದ್ದಾರೆ ಎಂದು ರಮೇಶ್ ಬಾಬು ವ್ಯಾಖ್ಯಾನಿಸಿದ್ದಾರೆ.
ಕೆಲವು ದಿನಗಳ ಹಿಂದೆ ಹೊಸಬಾಳೆರವರು, ದೇಶದಲ್ಲಿ ಏರುತ್ತಿರುವ ಹಣದುಬ್ಬರ ಮತ್ತು ದಿನಬಳಕೆಯ ಆಹಾರ ಪದಾರ್ಥಗಳ ಬೆಲೆಯೇರಿಕೆಯ ಮೇಲೆ ಕೇಂದ್ರ ಸರ್ಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಂಘಪರಿವಾರದ ಬೆಂಬಲಿತ ಭಾರತೀಯ ಕಿಸಾನ್ ಸಂಘದ ಕಾರ್ಯಕ್ರಮದಲ್ಲಿ ಹೇಳಿದ್ದರು. ಕೃಷಿಗೆ ಆದ್ಯತೆ ನೀಡುವುದು ಇಂದಿನ ಅವಶ್ಯಕತೆಯೆಂದು ತಿಳಿಸಿದ್ದರು. ಇದೇ ಮಾತುಗಳನ್ನು ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿಯವರು ದೇಶದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರಕ್ಕೆ ಹೇಳಿದಾಗ, ಬಿಜೆಪಿಯ ಅತೀ ಬುದ್ಧಿವಂತರು ಅಪಹಾಸ್ಯ ಮಾಡಿದ್ದರು ಎಂದು ನೆನಪಿಸಿರುವ ರಮೇಶ್ ಬಾಬು, ಎಐಸಿಸಿ ನಾಯಕ ರಾಹುಲ್ ಗಾಂಧಿಯವರ ಅಭಿಪ್ರಾಯಗಳನ್ನೇ ಹೊಸಬಾಳೆಯವರು ಪುನರುಚ್ಚರಿಸಿದ್ದಾರೆ ಎಂದು ಬೊಟ್ಟು ಮಾಡಿದ್ದಾರೆ.
ಪ್ರಪಂಚದ ಆರನೇ ದೊಡ್ಡ ಆರ್ಥಿಕ ರಾಷ್ಟçವಾಗಿ ಭಾರತ ದೇಶವು ಇಂದು ಹೊರಹೊಮ್ಮಲು ಹಿಂದಿನ ಕಾಂಗ್ರೆಸ್ ಪಕ್ಷದ ಪ್ರಧಾನ ಮಂತ್ರಿಗಳಾದ ಪಿ.ವಿ.ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್‌ರವರು ತೆಗೆದುಕೊಂಡ ಹಲವಾರು ಆರ್ಥಿಕ ಕ್ರಮಗಳು ಕಾರಣವಾಗಿರುತ್ತವೆ. ಜಿಎಸ್‌ಟಿ ಮುಖಾಂತರ ದೊಡ್ಡ ಮಟ್ಟದ ಆದಾಯವನ್ನು ಕೇಂದ್ರ ಸರ್ಕಾರ ಬಾಚಿಕೊಳ್ಳುತ್ತಿದ್ದರೂ, ಅತಿಯಾದ ಸಾಲಕ್ಕೆ ಶರಣಾಗುವ ಮೂಲಕ ಭಾರತದ ಇಂದಿನ ಆರ್ಥಿಕ ಪರಿಸ್ಥಿತಿ ಕಳವಳಕಾರಿಯಾಗಿದೆ ಎಂದು ರಮೇಶ್ ಬಾಬು ತಮ್ಮದೇ ದಾಟಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ. ಕೇಂದ್ರ ಸರ್ಕಾರವು ಹೊಸಬಾಳೆರವರ ಸಲಹೆಗಳನ್ನು ಸ್ವೀಕರಿಸಿ ಜಾರಿಗೊಳಿಸಿದರೆ ಅದು ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಕಾರ್ಯಕ್ರಮದ ಒಂದು ಅಂಶವನ್ನು ಜಾರಿಗೊಳಿಸಿದಂತೆ ಆಗುತ್ತದೆ ಎಂದಿರುವ ಅವರು, ಕರ್ನಾಟಕ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಕ್ಷವು, ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಕಾರ್ಯಕ್ರಮವನ್ನು ವಿಫಲಗೊಳಿಸಲು ವಿನಿಯೋಗಿಸುತ್ತಿರುವ ಸಮಯ ಮತ್ತು ಶ್ರಮವನ್ನು ಆಡಳಿತ ಯಂತ್ರದ ಮೇಲೆ ವಿನಯೋಗಿಸಿ, ಈ ದೇಶದ ಜನರನ್ನು, ಸಮುದಾಯಗಳನ್ನು, ಧರ್ಮಗಳನ್ನ ಬೆಸೆಯುವ ಕಾರ್ಯಕ್ಕೆ ಮುಂದಾಗಲಿ ಎಂದಿದ್ದಾರೆ. ಭಾವೈಕ್ಯತೆಯ ಸಂದೇಶದ ಜೊತೆಗೆ ಜನರ ಬದುಕನ್ನು ಹಸನುಗೊಳಿಸುವ ಸಂಕಲ್ಪ ಮಾಡಲಿ ಎಂದು ರಮೇಶ್ ಬಾಬು ಸಲಹೆ ಮುಂದಿಟ್ಟಿದ್ದಾರೆ.






















































