ಹೊಸಪೇಟೆ: ಸಂಪುಟ ಸರ್ಜರಿ ವಿಚಾರ ಕುರಿತಂತೆ ಬಿಜೆಪಿ ನಾಯಕರ ನಡುವೆ ವಲಸಿಗರು ಮೂಲ ನಾಯಕರು ಎಂಬ ಚರ್ಚೆ ನಡೆದಿದೆ ಎಂಬ ಬಗ್ಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಹೊಸಪೇಟೆಯಲ್ಲಿ 67 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಯುವಜನ ಮಹಿಳಾ ಮತ್ತು ಅಬಲ ವರ್ಗದವರಿಗಾಗಿ ಸಹಕಾರ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, ನಮ್ಮಲ್ಲಿ ಯಾರಿಗೂ ಅಸಮಾಧಾನವಿಲ್ಲ. ಎಲ್ಲರೂ ಸಹೋದರರಂತಿದ್ದೇವೆ ಎಂದು ಬಿ.ಸಿ.ಪಾಟೀಲ್ ಹೇಳಿದರು.
ಮುಖ್ಯಮಂತ್ರಿಗಳನ್ನಾಗಲೀ ಪಕ್ಷದ ವರಿಷ್ಠರನ್ನಾಗಲಿ ಶಾಸಕರು ಭೇಟಿ ಮಾಡಿದ ತಕ್ಷಣ ಅವರೆಲ್ಲ ಮಂತ್ರಿಗಿರಿಗಾಗಿಯೇ ಹೋಗಿದ್ದಾರೆ ಎನ್ನುವ ಕಲ್ಪನೆ ತಪ್ಪು.ಶುಭಾಶಯ ಕೋರಲೋ ಅಥವಾ ಕ್ಷೇತ್ರದ ಕೆಲಸಕ್ಕಾಗಿಯೋ ಭೇಟಿ ಮಾಡುವುದು ಸಹಜವೇ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮ ಹದಿನೇಳು ಜನರನ್ನು ಬಹಳ ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದಾರೆ.ಅದರಂತೆ ಎಲ್ಲಾ ಶಾಸಕರು ಸಚಿವರನ್ನೂ ಸಹ ಗೌರವದಿಂದಲೇ ಕಾಣುತ್ತಿದ್ದಾರೆ. ಯಾರ್ಯಾರಿಗೆ ಏನು ಸ್ಥಾನಮಾನ ಗೌರವ ಕೊಡಬೇಕು ಎಂಬುದು ಮುಖ್ಯಮಂತ್ರಿಗಳಿಗೆ ಚೆನ್ನಾಗಿ ಗೊತ್ತಿದೆ ಎಂದು ಬಿ.ಸಿ.ಪಾಟೀಲ್ ಹೇಳಿದರು.