ಬೆಂಗಳೂರು: ರಾಜಧಾನಿ ಬೆಂಗಳೂರು ನಗರ ಅಭಿವೃದ್ಧಿ ಹೆಸರಲ್ಲಿ ಜಾಗತಿಕ ಗಮನ ಕೇಂದ್ರೀಕರಿಸಿದ್ದರೂ ಅವಾಂತರಗಳಿಂದ ದೂರ ಉಳಿದಿಲ್ಲ. ಅದರಲ್ಲೂ ಟ್ರಾಫಿಕ್ ಸಮಸ್ಯೆ ಜನರು ಕಂಗಾಲಾಗಿದ್ದಾರೆ.
ರಸ್ತೆ ಅಭಿವೃದ್ಧಿ ನೆಪದಲ್ಲಿ ಕಾಮಗಾರಿಗಳನ್ನು ನಡೆದಿದೆಯೇ ಹೊರತು, ರಸ್ತೆ ತೆರಿಗೆ ಕಟ್ಟಿರುವ ವಾಹನ ಮಾಲೀಕರಿಗೆ ಸೂಕ್ತ ಸೌಲಭ್ಯವಿಲ್ಲ. ಅದರಲ್ಲೂ ಟ್ರಾಫಿಕ್ ಪೊಲೀಸರ ಕಾರ್ಯವೈಖರಿ ಸಾರ್ವಜನಿಕರ ಸಹನೆಯನ್ನೂ ಪರೀಕ್ಷಿಸಿದ್ದುಂಟು.
ಈ ನಡುವೆ, ಬೆಂಗಳೂರಿನ ರಾಮಮೂರ್ತಿನಗರ ಬಳಿಯ ಟಿ.ಸಿ.ಪಾಳ್ಯದಲ್ಲಿ ಸಾರ್ವಜನಿಕರು ತಮ್ಮ ಟ್ರಾಫಿಕ್ ಅಧ್ವಾನವನ್ನು ಮುಂದಿಟ್ಟು ಹೋರಾಟದ ಅಖಾಡಕ್ಕೆ ಧುಮುಕಿ ಜನರ ಗಮನ ಕೇಂದ್ರೀಕರಿಸಿದ್ದಾರೆ.
ಟಿ.ಸಿ.ಪಾಳ್ಯದಲ್ಲಿ ಅನೇಕ ಕಟ್ಟಡಗಳು, ವಾಣಿಜ್ಯ ಸಮುಚ್ಚಯಗಳು ಇದ್ದರೂ ಸಾರ್ವಜನಿಕರ ವಾಹನ ನಿಲುಗಡೆಗೆ ವ್ಯವಸ್ಥೆಯಿಲ್ಲ. ಇಂದು ವೇಳೆ ರಸ್ತೆ ಬದಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದರೆ, ಟ್ರಾಫಿಕ್ ಪೊಲೀಸರ ತಂಡ ಟೋಯಿಂಗ್ ಮಾಡುತ್ತದೆ. ‘ನೋ ಪಾರ್ಕಿಂಗ್’ ಗೊಂದಲಗಳನ್ನು ಬಗೆಹರಿಸದ ಪೊಲೀಸರು ಮೊದಲು ಸಮಸ್ಯೆ ಬಗೆಹರಿಸಬೇಕೆಂಬುದು ಸಾರ್ವಜನಿಕರ ಅಳಲು.
ಈ ಸಂಬಂಧ ಸ್ಥಳೀಯ ಉದ್ಯಮಿ ದೀಪಕ್ ಪೈ ಸಹಿತ ಟಿ.ಸಿ.ಪಾಳ್ಯದ ಸಾರ್ವಜನಿಕರು ‘ಸಿಟಿಜನ್ ರೈಟ್ಸ್ ಫೌಂಡೇಷನ್’ಗೆ ದೂರು ನೀಡಿದ್ದು, ಸಾಮಾಜಿಕ ಹಿತಾಸಕ್ತಿಗಾಗಿ ಹೋರಾಡುತ್ತಿರುವ ಈ ಸಂಘಟನೆ ಬೆಂಗಳೂರಿನ ಈ ಟ್ರಾಫಿಕ್ ಸಮಸ್ಯೆ ವಿರುದ್ದವೂ ಹೋರಾಡಿ ನ್ಯಾಯ ದೊರಕಿಸಿ ಕೊಡಬೇಕೆಂದು ಕೋರಿದ್ದಾರೆ.