ಬೆಂಗಳೂರು: ಕೃಷಿಗೆ ಬಿಕ್ಕಟ್ಟು ಸೃಷ್ಟಿಸಬಲ್ಲ ಮೂರು ಪ್ರಮುಖ ಕಾಯ್ದೆಗಳ ತಿದ್ದಿಪಡಿ ವಿರೋಧಿಸಿ, ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ಬೆಂಬಲಿಸಿ ರೈತರು, ಕಾರ್ಮಿಕರು ಹಾಗೂ ದಲಿತರ ಐಕ್ಯ ಹೋರಾಟ ಸಮಿತಿ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ವೃತ್ತದಲ್ಲಿ ನಡೆದ ಸಭೆ ಕೂಡಾ ಗಮನಸೆಳೆಯಿತು.
ಈ ವೇಳೆ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಉತ್ತರ ಭಾರತದ ಎಲ್ಲ ರಾಜ್ಯಗಳಲ್ಲೂ ರೈತರ ಹೋರಾಟ ತೀವ್ರಗೊಂಡಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಇದನ್ನು ತೀವ್ರಗೊಳಿಸುವ ಮತ್ತು ನೈಜ ಚಿತ್ರಣವನ್ನು ರೈತರಿಗೆ ತಿಳಿಸುವ ನಿಟ್ಟಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ರೈತರಿಗೆ ಮಾರಕಾಗಿರುವ ಕಾಯ್ದೆಗಳನ್ನು ವಿರೋಧಿಸಿ 150ಕ್ಕೂ ಅಧಿಕ ಸಂಘಟನೆಗಳು ಹೋರಾಟದಲ್ಲಿ ಭಾಗವಹಿಸಿವೆ. ಕಾಯ್ದೆಗಳ ಬಗ್ಗೆ ಸಂಸತ್ತು ನಿರ್ಧರಿಸಬೇಕಾಗಿರುವುದರಿಂದ ಬಜೆಟ್ ಅಧಿವೇಶನದವರೆಗೂ ಈ ಹೋರಾಟ ಮುಂದುವರೆಯಲಿದೆ ಎಂದರು.
ಜ. 26ರಂದು ಹೋರಾಟದ ಭಾಗವಾಗಿ ಟ್ರ್ಯಾಕ್ಟರ್ ರ‍್ಯಾಲಿ ನಡೆಯಲಿದೆ’ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್, ವಿವಿಧ ಸಂಘಟನೆಗಳ ಮುಖಂಡರಾದ ಚಂದ್ರತೇಜಸ್ವಿ, ಆರ್.ಪ್ರಸನ್ನ, ಸುಲೋಚನಮ್ಮ, ಪುರುಷೋತ್ತಮ, ಸಂಜೀವನಾಯ್ಕ್, ರಾಜುಸಣ್ಣಕ್ಕಿ, ಪಿ.ಎ.ವೆಂಕಟೇಶ್, ವಕೀಲರಾದ ರುದ್ರಆರಾದ್ಯ, ರೇಣುಕಾರಾಧ್ಯ ಮೊದಲಾದವರು ಭಾಗವಹಿಸಿ ಕೇಂದ್ರದ ಕೃಷಿ ಕಾಯ್ದೆ ರೈತ ವಿರೋಧಿಯಾಗಿದೆ ಎಂದು ಆರೋಪಿಸಿದರು.