ಬೆಂಗಳೂರು (ಗ್ರಾ): ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಸಾವಿರಾರು ಮಂದಿ ವಾಸಿಸಲು ಸೂರಿಲ್ಲದೆ ಪರದಾಡುವಂತಾಗಿದೆ. ಆರ್ಹ ನಿರಾಶ್ರಿತರನ್ನು ಗುರುತಿಸಿ ಸರ್ಕಾರ ನಿವೇಶನಗಳನ್ನು ಹಂಚಿಕೆ ಮಾಡಬೇಕೆಂದು ಜನಪರ ಒಕ್ಕೂಟ ಸಂಘಟನೆಯ ಅಧ್ಯಕ್ಷ ನಂಜುಂಡಪ್ಪ ಆಗ್ರಹಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ಮುಂದೆ ಸೋಮವಾರ ನಿವೇಶನ ರಹಿತರಿಗೆ ನಿವೇಶನ ಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಯಿತು. ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದ ನಂಜುಂಡಪ್ಪ, ಉಳ್ಳವರು ಮಾತ್ರ ಅಧಿಕಾರಿಗಳು, ರಾಜಕೀಯ ನಾಯಕರ ಮೇಲೆ ಒತ್ತಡ ಹಾಕಿ ಕಾನೂನು ಬಾಹಿರವಾಗಿ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಬಡ, ಮಧ್ಯಮ ವರ್ಗದವರು ಸರ್ಕಾರಿ ಕಚೇರಿಗಳಿಗೆ ಅಲೆಯುವುದರಲ್ಲೇ ತಮ್ಮ ಜೀವನ ಸವೆಸುತ್ತಿದ್ದಾರೆ ಎಂದು ವ್ಯವಸ್ಥೆಯ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ಹಲವಾರು ವರ್ಷಗಳಿಂದ ಸೂರಿಲ್ಲದೆ ವಾಸಿಸುತ್ತಿರುವಂತ ಅರ್ಹರನ್ನು ಗುರುತಿಸಿ ಸರ್ಕಾರ ನಿವೇಶನ ನೀಡಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.
ಜನಪರ ಒಕ್ಕೂಟದ ಪ್ರಮುಖರಾದ ಸಿದ್ದರಾಜು, ಯಲ್ಲಪ್ಪ ಬಾಬಾಜಾನ್, ರೆಡ್ಡಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.