ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ಅಚ್ಚರಿಯ ತೀರ್ಮನವೊಂದರಲ್ಲಿ ಹಿಂದೂ ಮುಖಂಡ ಕರಾವಳಿ ಬಿಜೆಪಿಯ ಪ್ರಭಾವಿ ನಾಯಕ ಅರುಣ್ ಪುತ್ತಿಲ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ತಯಾರಿ ನಡೆಸಿದೆ.
ಹಿಂದೂ ಮುಖಂಡರ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇತ್ತೀಚೆಗಷ್ಟೇ ಆರೋಪ ಮಾಡಿದ್ದರು. ಅದರ ಬೆನ್ನಲ್ಲೇ ಕರಾವಳಿಯ ಬಿಜೆಪಿ ನಾಯಕ ಅರುಣ್ ಪುತ್ತಿಲ ಅವರನ್ನು ಗಡಿಪಾರು ಮಾಡಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಪ್ರಕ್ರಿಯೆ ನಡೆಸಿದೆ.
ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರು ಗಡೀಪಾರು ನೋಟಿಸ್ ಜಾರಿ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಿಂದ ಕಲಬುರ್ಗಿ ಜಿಲ್ಲೆಯ ಶಹಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡೀಪಾರು ಮಾಡುವ ಬಗ್ಗೆ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಆರುಣ್ ಕುಮಾರ್ ಪುತ್ತಿಲ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ: 55 ರಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಕಲಬುರ್ಗಿ ಜಿಲ್ಲೆಯ ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡೀಪಾರು ಆದೇಶ ಹೊರಡಿಸುವ ಕುರಿತು ವಿಚಾರಣೆಯನ್ನು ದಿನಾಂಕ: 06-06-2025 ರಂದು ನಿಗದಿಪಡಿಸಲಾಗಿದೆ. ಅಂದು ವಿಚಾರಣೆಗೆ ತಪ್ಪದೇ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಪುತ್ತೂರು ವಿಭಾಗದ ಸಹಾಯಕ ಆಯುಕ್ತರು ನೀಡಿರುವ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಆದರೆ ಅರುಣ್ ಪುತ್ತಿಲಗೆ ಯಾವ ಕಾರಣಕ್ಕೆ ಗಡಿಪಾರು ನೋಟಿಸ್ ನೀಡಲಾಗಿದೆ ಎಂಬುದನ್ನು ನೋಟಿಸ್ನಲ್ಲಿ ಉಲ್ಲೇಖಿಸಿಲ್ಲ.





































































