ನವದೆಹಲಿ: ಆಪರೇಷನ್ ಸಿಂಧೂರ್, ಬಾಲಾಕೋಟ್ ವಾಯುದಾಳಿ ಮತ್ತು ಸರ್ಜಿಕಲ್ ದಾಳಿಗಳು ಭಯೋತ್ಪಾದನೆಯ ವಿರುದ್ಧ ಭಾರತದ ಕಾರ್ಯತಂತ್ರದಲ್ಲಿ ಮಹತ್ವದ ಬದಲಾವಣೆಯನ್ನು ಸೂಚಿಸಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ. ಭಯೋತ್ಪಾದಕ ದಾಳಿಗಳನ್ನು ಖಂಡಿಸುವುದಕ್ಕೆ ಸೀಮಿತವಾಗದೆ, ಭಯೋತ್ಪಾದಕ ಜಾಲಗಳ ವಿರುದ್ಧ ಪೂರ್ವಭಾವಿ ಕ್ರಮ ಕೈಗೊಳ್ಳುವ ಹಂತಕ್ಕೆ ಭಾರತ ಮುನ್ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ರಕ್ಷಣಾ ಸಮಾವೇಶದಲ್ಲಿ ಮಾತನಾಡಿದ ಸಿಂಗ್, ಪಾಕಿಸ್ತಾನದಿಂದ ಪ್ರಾಯೋಜಿತವಾಗುವ ಯಾವುದೇ ಭವಿಷ್ಯದ ಭಯೋತ್ಪಾದಕ ದಾಳಿಗೆ ಭಾರತ ಇನ್ನಷ್ಟು ಬಲವಾದ ಪ್ರತಿಕ್ರಿಯೆ ನೀಡಲಿದೆ ಎಂದು ಎಚ್ಚರಿಸಿದರು. ಭಾರತ ಶಾಂತಿಗೆ ಬದ್ಧವಾಗಿದ್ದರೂ ತನ್ನ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಒಂಟಿ ವ್ಯಕ್ತಿಯಿಂದ ನಡೆಯುವ ‘ಲೋನ್ ವುಲ್ಫ್’ ದಾಳಿಗಳು ಮತ್ತು ತಾವು ‘ವೈಟ್ ಕಾಲರ್ ಭಯೋತ್ಪಾದನೆ’ ಎಂದು ಕರೆದಿರುವ ಹೊಸ ಸ್ವರೂಪದ ಬೆದರಿಕೆಗಳ ಬಗ್ಗೆ ಸಿಂಗ್ ಎಚ್ಚರಿಕೆ ನೀಡಿದರು. ತಪ್ಪು ಮಾಹಿತಿ, ಅಸ್ಥಿರತೆ, ಅಡ್ಡಿಪಡಿಸುವಿಕೆ, ವಂಚನೆ ಮತ್ತು ವಿನಾಶವನ್ನು ಒಳಗೊಂಡ ‘5ಡಿ ಭದ್ರತಾ ಬೆದರಿಕೆ’ಯನ್ನೂ ಅವರು ಪ್ರಸ್ತಾಪಿಸಿದರು.

ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಭದ್ರತಾ ಸಂಸ್ಥೆಗಳು ಹೆಚ್ಚಿನ ಜಾಗರೂಕತೆ ವಹಿಸಬೇಕು. ಇದರ ಜೊತೆಗೆ ನಾಗರಿಕರು ಕೂಡ ಜವಾಬ್ದಾರಿಯುತವಾಗಿ ನಡೆದುಕೊಂಡು ಭದ್ರತಾ ಪ್ರಯತ್ನಗಳಿಗೆ ಸಹಕರಿಸಬೇಕು ಎಂದು ಹೇಳಿದರು.
ಬದಲಾಗುತ್ತಿರುವ ಭದ್ರತಾ ಸವಾಲುಗಳನ್ನು ಎದುರಿಸಲು ‘ಸ್ಮಾರ್ಟ್ ಪವರ್’ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ರಕ್ಷಣಾ ಸಚಿವರು ಪ್ರತಿಪಾದಿಸಿದರು. ಸುಧಾರಿತ ಶಸ್ತ್ರಾಸ್ತ್ರಗಳು, ಕೃತಕ ಬುದ್ಧಿಮತ್ತೆ (ಎಐ), ಮಾನವ ಗುಪ್ತಚರ ಮಾಹಿತಿ ಮತ್ತು ವೆಚ್ಚ-ಪರಿಣಾಮಕಾರಿ ರಕ್ಷಣಾ ತಂತ್ರಜ್ಞಾನಗಳನ್ನು ಸಮನ್ವಯಗೊಳಿಸುವ ಮೂಲಕ ದೇಶದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಬೇಕು ಎಂದರು.
ದೇಶೀಯ ರಕ್ಷಣಾ ಉತ್ಪಾದನೆಯಲ್ಲಿ ಆಗಿರುವ ಪ್ರಗತಿಯನ್ನು ಉಲ್ಲೇಖಿಸಿದ ಸಿಂಗ್, 2014ರಲ್ಲಿ ₹40,000 ಕೋಟಿ ಇದ್ದ ಉತ್ಪಾದನಾ ಮೌಲ್ಯವು ದಾಖಲೆಯ ₹1.78 ಲಕ್ಷ ಕೋಟಿಗೆ ಏರಿದೆ ಎಂದು ತಿಳಿಸಿದರು.
2013–14ರಲ್ಲಿ ₹686 ಕೋಟಿ ಇದ್ದ ರಕ್ಷಣಾ ರಫ್ತು ಈಗ ₹39,000 ಕೋಟಿಗೆ ಹೆಚ್ಚಾಗಿದೆ. ಭಾರತೀಯ ರಕ್ಷಣಾ ಉತ್ಪನ್ನಗಳು ಸುಮಾರು 100 ದೇಶಗಳನ್ನು ತಲುಪುತ್ತಿವೆ ಎಂದು ಅವರು ಹೇಳಿದರು.
2029ರ ವೇಳೆಗೆ ₹3 ಲಕ್ಷ ಕೋಟಿ ಮೌಲ್ಯದ ರಕ್ಷಣಾ ಉತ್ಪಾದನೆ ಮತ್ತು ₹50,000 ಕೋಟಿ ಮೌಲ್ಯದ ರಫ್ತು ಸಾಧಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದರು.
ರಕ್ಷಣಾ ಆಧುನೀಕರಣದ ಬಜೆಟ್ನ ಶೇ. 75ರಷ್ಟನ್ನು ದೇಶೀಯ ಖರೀದಿಗೆ ಮೀಸಲಿಡಲಾಗಿದೆ ಎಂದು ಸಿಂಗ್ ಹೇಳಿದರು. ರಕ್ಷಣಾ ಕ್ಷೇತ್ರದಲ್ಲಿ ಸ್ಟಾರ್ಟ್ಅಪ್ಗಳು ಮತ್ತು ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ (ಎಂಎಸ್ಎಂಇ) ಉತ್ತೇಜನ ನೀಡುವ ಉಪಕ್ರಮಗಳನ್ನೂ ಅವರು ಉಲ್ಲೇಖಿಸಿದರು.
ಸಶಸ್ತ್ರ ಪಡೆಗಳು ಬಳಸುವ 175 ವಿಧದ ಮದ್ದುಗುಂಡುಗಳ ಪೈಕಿ 159 ವಿಧಗಳನ್ನು ಈಗ ದೇಶದಲ್ಲೇ ಉತ್ಪಾದಿಸಲಾಗುತ್ತಿದೆ ಎಂದು ತಿಳಿಸಿದರು. ಈ ಬೆಳವಣಿಗೆಯು ರಕ್ಷಣಾ ಸಾಮಗ್ರಿಗಳ ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಪ್ರಯತ್ನದ ಭಾಗವಾಗಿದೆ.
ತಂತ್ರಜ್ಞಾನ, ಆರ್ಥಿಕತೆ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ದೇಶದ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಮೂಲಕ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸಬಹುದು ಎಂಬ ವಿಶ್ವಾಸವನ್ನು ರಾಜನಾಥ್ ಸಿಂಗ್ ವ್ಯಕ್ತಪಡಿಸಿದರು.
















































































