ವಾಷಿಂಗ್ಟನ್: ಅಮೆರಿಕದಲ್ಲಿ ಭಾರತೀಯ ಮೂಲದ ಜನರನ್ನು ಗುರಿಯಾಗಿಸಿಕೊಂಡು ಸಾಮೂಹಿಕ ಗುಂಡಿನ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಇಲಿನಾಯ್ಸ್ನ ಅರೋರಾ ಪ್ರದೇಶದಲ್ಲಿರುವ ಹಿಂದೂ ದೇವಾಲಯವೊಂದನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಂಚು ರೂಪಿಸಿದ್ದ ಎನ್ನಲಾದ ಆರೋಪಿಯ ರೈಫಲ್ ಕೊನೆಯ ಕ್ಷಣದಲ್ಲಿ ಜಾಮ್ ಆಗಿದ್ದರಿಂದ ಭಾರೀ ಅನಾಹುತ ತಪ್ಪಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಬಂಧಿತನನ್ನು ಪಲಾಟೈನ್ ನಿವಾಸಿ ಅಲೆಕ್ಸಾಂಡ್ರೋಸ್ ಪಪೊರಾಕಿಸ್ ಎಂದು ಗುರುತಿಸಲಾಗಿದೆ. ಈತ ಭಾರತೀಯ ಮೂಲದವರು ಹಾಗೂ ದಕ್ಷಿಣ ಏಷ್ಯಾ ಮೂಲದ ಜನರ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದಿಸುವ ವಿಚಾರಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದ ಎನ್ನಲಾಗಿದೆ.

ರೈಫಲ್ ಜಾಮ್ ಆಗಿದ್ದರಿಂದ ತಪ್ಪಿದ ಅನಾಹುತ?
ತನಿಖಾಧಿಕಾರಿಗಳ ಪ್ರಕಾರ, ಅಕ್ಟೋಬರ್ 11ರಂದು ಅರೋರಾ ಪ್ರದೇಶದಲ್ಲಿರುವ ಹಿಂದೂ ದೇವಾಲಯವೊಂದರ ಮೇಲೆ ದಾಳಿ ನಡೆಸಲು ಆರೋಪಿ ಯೋಜಿಸಿದ್ದಿರಬಹುದು. ಆದರೆ, ದಾಳಿ ನಡೆಸಲು ಉದ್ದೇಶಿಸಿದ್ದ ನಿಖರ ಸ್ಥಳದ ಬಗ್ಗೆ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ.
ಪಪೊರಾಕಿಸ್ ಪಲಾಟೈನ್ನ ಟ್ಯಾಕೋ ಬೆಲ್ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ. ಭಾನುವಾರ ವಿಶೇಷ ದಿನವಾಗಲಿದೆ ಎಂದು ತನ್ನ ಸಹೋದ್ಯೋಗಿಗಳಿಗೆ ಹೇಳಿದ್ದ ಎನ್ನಲಾಗಿದೆ. ಅಂದು ಬೆಳಿಗ್ಗೆ ಸಹೋದ್ಯೋಗಿಯೊಬ್ಬರಿಗೆ ಕರೆ ಮಾಡಿ, ತನ್ನ ಬಂದೂಕು ಜಾಮ್ ಆಗಿದೆ ಎಂದು ತಿಳಿಸಿದ್ದ. ಬಳಿಕ ಅಲ್ಲಿಂದ ವೇಗವಾಗಿ ತೆರಳಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಮನೆಯಲ್ಲಿ ರೈಫಲ್, ಗುಂಡುಗಳು ಪತ್ತೆ
ಸಾಮೂಹಿಕ ಗುಂಡಿನ ದಾಳಿ ನಡೆಸುವ ಯೋಜನೆಯ ಬಗ್ಗೆ ಆರೋಪಿ ವ್ಯಕ್ತಿಯೊಬ್ಬರೊಂದಿಗೆ ಮಾಹಿತಿ ಹಂಚಿಕೊಂಡಿದ್ದಾನೆ ಎಂಬ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು. ದಾಳಿಯ ಯೋಜನೆಯನ್ನು ವಿವರಿಸುವ ದಾಖಲೆಯ ಜೊತೆಗೆ ರೈಫಲ್, ಮ್ಯಾಗಜೀನ್ಗಳು, ದೇಹದ ರಕ್ಷಣಾ ಕವಚ ಹಾಗೂ ಇತರ ಯುದ್ಧತಂತ್ರದ ಉಪಕರಣಗಳ ಚಿತ್ರಗಳನ್ನೂ ಕಳುಹಿಸಿದ್ದ ಎನ್ನಲಾಗಿದೆ.
ಪಲಾಟೈನ್ ಮತ್ತು ಮೌಂಟ್ ಪ್ರಾಸ್ಪೆಕ್ಟ್ ಪೊಲೀಸ್ ಇಲಾಖೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಅಕ್ಟೋಬರ್ 11ರ ಸಂಜೆ ಆರೋಪಿ ಮನೆಯಿಂದ ಹೊರಬರುತ್ತಿದ್ದಾಗ ಆತನನ್ನು ವಶಕ್ಕೆ ಪಡೆದವು. ಬಳಿಕ ಆತನ ನಿವಾಸದಲ್ಲಿ ಶೋಧ ನಡೆಸಿದ ಪೊಲೀಸರು ಒಂದು ರೈಫಲ್, ಗುಂಡು ತುಂಬಿದ್ದ ಹಲವು ಮ್ಯಾಗಜೀನ್ಗಳು, ನೂರಾರು ಹೆಚ್ಚುವರಿ ರೈಫಲ್ ಗುಂಡುಗಳು, ಯುದ್ಧತಂತ್ರದ ಉಪಕರಣಗಳು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಉಗ್ರವಾದಿ ಸಿದ್ಧಾಂತಗಳ ಪ್ರಸ್ತಾಪ
ಪೊಲೀಸರು ಆರೋಪಿಯ ಎಲೆಕ್ಟ್ರಾನಿಕ್ ಸಂವಹನ ದಾಖಲೆಗಳು ಹಾಗೂ ‘Why I Fought: A.K.A.: (Aurora shooter’s manifesto)’ ಎಂಬ ಹೆಸರಿನ ದಾಖಲೆಯನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ಬಿಳಿಯರ ಶ್ರೇಷ್ಠತೆಯನ್ನು ಪ್ರತಿಪಾದಿಸುವ ಉಗ್ರವಾದಿ ಸಿದ್ಧಾಂತಗಳು ಮತ್ತು ದಕ್ಷಿಣ ಏಷ್ಯಾ ಮೂಲದವರು, ವಿಶೇಷವಾಗಿ ಭಾರತೀಯ ಮೂಲದವರ ವಿರುದ್ಧ ಹಿಂಸಾಚಾರ ನಡೆಸುವ ಪ್ರಸ್ತಾಪಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಧಾರ್ಮಿಕ ಆರಾಧನಾ ಸ್ಥಳಗಳ ರಕ್ಷಣೆ ಕಾನೂನು ಜಾರಿ ಸಂಸ್ಥೆಗಳ ಪ್ರಮುಖ ಆದ್ಯತೆಯಾಗಿದೆ ಎಂದು ಪಲಾಟೈನ್ ಪೊಲೀಸ್ ಮುಖ್ಯಸ್ಥ ವಿಲಿಯಂ ನಾರ್ಡ್ ಹೇಳಿದ್ದಾರೆ.
ನ್ಯಾಯಾಂಗ ಬಂಧನಕ್ಕೆ ಆರೋಪಿ
ಬುಧವಾರ ರೋಲಿಂಗ್ ಮೆಡೋಸ್ನ ಕುಕ್ ಕೌಂಟಿ ಮೂರನೇ ಮುನ್ಸಿಪಲ್ ಜಿಲ್ಲಾ ನ್ಯಾಯಾಲಯಕ್ಕೆ ಪಪೊರಾಕಿಸ್ನನ್ನು ಹಾಜರುಪಡಿಸಲಾಯಿತು. ನ್ಯಾಯಾಧೀಶರು ಆತನನ್ನು ನ್ಯಾಯಾಂಗ ಬಂಧನದಲ್ಲಿಡಲು ಆದೇಶಿಸಿದ್ದು, ಮುಂದಿನ ವಿಚಾರಣೆ ಅಕ್ಟೋಬರ್ 30ರಂದು ನಡೆಯಲಿದೆ.
ಅಮೆರಿಕದಲ್ಲಿ ನವರಾತ್ರಿ ಸೇರಿದಂತೆ ಹಿಂದೂಗಳ ಹಬ್ಬದ ಋತು ಆರಂಭವಾಗಿರುವ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಇದಕ್ಕೂ ಎರಡು ವಾರಗಳ ಹಿಂದೆ ಓಹಿಯೋದ ರಿಚ್ಮಂಡ್ ಹೈಟ್ಸ್ನಲ್ಲಿರುವ ಶ್ರೀ ಸ್ವಾಮಿನಾರಾಯಣ ವಡ್ತಾಲ್ ಧಾಮ್ ಹಿಂದೂ ಮಂದಿರವನ್ನು ಧ್ವಂಸಗೊಳಿಸಲಾಗಿತ್ತು.
ಘಟನೆಯ ಹಿಂದಿನ ಉದ್ದೇಶ, ದಾಳಿಯ ಗುರಿ ಹಾಗೂ ಸಂಚಿನ ಸಂಪೂರ್ಣ ವಿವರಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
















































































