ನವದೆಹಲಿ: ವಿಮಾನ ಹಾರಾಟದ ವೇಳೆ ನಡೆದ ದಾಳಿಯ ಪ್ರಯತ್ನವನ್ನು ವಿಫಲಗೊಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಧೈರ್ಯವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶ್ಲಾಘಿಸಿದ್ದಾರೆ. ಅವರನ್ನು ಭಾರತ, ಇಸ್ರೇಲ್ ಮಾತ್ರವಲ್ಲದೆ ಇಡೀ ವಿಶ್ವದ ನಾಯಕ ಎಂದು ಬಣ್ಣಿಸಿರುವ ನೆತನ್ಯಾಹು, ಇಸ್ರೇಲ್ನ ಮುಂದಿನ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಂಭ್ರಮಾಚರಣೆಯ ಜ್ಯೋತಿ ಬೆಳಗಿಸಲು ಕ್ಯಾಪ್ಟನ್ ಮಚ್ಚಾರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ್ದಾರೆ.

ಭಾನುವಾರ ಕ್ಯಾಪ್ಟನ್ ಮಚ್ಚಾರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ನೆತನ್ಯಾಹು, ಅವರ ಸಾಹಸವನ್ನು ಕೊಂಡಾಡಿದರು. “ಕ್ಯಾಪ್ಟನ್, ನಮ್ಮ ಮುಂದಿನ ಸ್ವಾತಂತ್ರ್ಯ ದಿನದಂದು ಸಂಭ್ರಮಾಚರಣೆಯ ಜ್ಯೋತಿ ಬೆಳಗಿಸಲು ನಿಮ್ಮನ್ನು ಮತ್ತು ನನ್ನ ಆತ್ಮೀಯ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ಬಯಸುತ್ತೇನೆ. ನೀವು ಭಾರತ ಮತ್ತು ಇಸ್ರೇಲ್ನ ಧೈರ್ಯಶಾಲಿ ಜನರ ನಿಜವಾದ ನಾಯಕ ಮಾತ್ರವಲ್ಲ, ಇಡೀ ವಿಶ್ವದ ನಾಯಕ,” ಎಂದು ಹೇಳಿದರು.
ಕ್ಯಾಪ್ಟನ್ ಮಚ್ಚಾರ್ ಅವರು ಶೀಘ್ರವಾಗಿ ಹಾಗೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ನೆತನ್ಯಾಹು ಹಾರೈಸಿದರು.
ಈ ಗೌರವವನ್ನು ಸಾಮಾನ್ಯವಾಗಿ ಇಸ್ರೇಲ್ನ ನಾಗರಿಕರಿಗೆ ಮಾತ್ರ ಮೀಸಲಿಡಲಾಗುತ್ತದೆ. ಅಂತಹ ವಿಶೇಷ ಗೌರವಕ್ಕೆ ಭಾರತೀಯ ಪೈಲಟ್ ಅವರನ್ನು ಆಹ್ವಾನಿಸಿರುವುದು ಅವರ ಧೈರ್ಯ ಮತ್ತು ಸಾಹಸಕ್ಕೆ ಇಸ್ರೇಲ್ ನೀಡಿರುವ ಮನ್ನಣೆಯಾಗಿದೆ ಎಂದು ನೆತನ್ಯಾಹು ತಿಳಿಸಿದ್ದಾರೆ.















































































