ರಾಮನಗರ: ಸರಕಾರಿ ಶಾಲೆಗಳಲ್ಲಿ ನಿತ್ಯದ ವೆಚ್ಚಕ್ಕೆ ಪೋಷಕರಿಂದ ಮಾಸಿಕ 100 ರೂ. ವಸೂಲಿ ವಿಚಾರದ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚನ್ನಪಟ್ಟಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಇದು ಅತಿ ನಾಚಿಕೆಗೇಡಿನ ಸಂಗತಿ. ತಕ್ಷಣವೇ ಸರಕಾರ ಈ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡಿದರು. ಪೋಷಕರ ಬಳಿ ಹಣ ವಸೂಲಿ ಮಾಡೋದು ಕೆಟ್ಟ ನಿರ್ಧಾರ. ಸರಕಾರಿ ಶಾಲೆಗಳಲ್ಲಿ ಸರಿಯಾಗಿ ಮೂಲಭೂತ ಸೌಕರ್ಯಗಳಿಲ್ಲ. ಆದರೆ, ಪೋಷಕರಿಂದ ಚಂದಾ ವಸೂಲಿ ಮಾಡೋದು ಸರಕಾರದ ದಿವಾಳಿತನವನ್ನು ತೋರಿಸುತ್ತದೆ. ಈ ರೀತಿಯ ತೀರ್ಮಾನ ಮಾದುವುದಕ್ಕೆ ಸರಕಾರಕ್ಕೆ ನಾಚಿಕೆ ಆಗಬೇಕು ಎಂದು ಗರಂ ಆದರು ಮಾಜಿ ಮುಖ್ಯಮಂತ್ರಿಗಳು.
ರಾಜ್ಯದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ದಿನನಿತ್ಯದ ಖರ್ಚು ವೆಚ್ಚಗಳನ್ನು ಭರಿಸಲು ಪ್ರತಿ ತಿಂಗಳು ವಿದ್ಯಾರ್ಥಿಗಳಿಂದ 100 ರು. ಸಂಗ್ರಹ ಮಾಡುವ ಬಗ್ಗೆ ರಾಜ್ಯ ಬಿಜೆಪಿ ಸರಕಾರ ಒಪ್ಪಿಗೆ ನೀಡಿದ್ದು, ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.







































































