ಮಂಗಳೂರು: ಸುರತ್ಕಲ್ ಟೋಲ್ ಗೇಟ್ ವಿರುದ್ಧ ತರಾತುರಿಯ ಹೋರಾಟ ಬೇಡ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸಲಹೆ ಮಾಡಿದ್ದಾರೆ.
ಸುರತ್ಕಲ್ ಟೋಲ್ ಕಿತ್ತೆಸೆಯಲು ‘ನೇರ ಕಾರ್ಯಾಚರಣೆ’ಗೆ ಕರೆ ನೀಡಲಾಗಿದೆ ಎಂಬ ವಿಚಾರ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಶಾಂತಿಯುತ ಹೋರಾಟಕ್ಕೆ ನನ್ನ ವಿರೋಧ ಇಲ್ಲ, ಆದರೆ ಕಾನೂನು ಕೈಗೆತ್ತಿಕೊಳಬಾರದು. ಹಾಗಾಗಿ ಹೋರಾಟವನ್ನು 20 ದಿನಗಳ ಕಾಲ ಮುಂದೂಡಿ ಎಂದು ಹೋರಾಟಗಾರರಿಗೆ ಮನವಿ ಮಾಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋರಾಟ ಕೈ ಬಿಡಿ ಅಂತ ಈಗಾಗಲೇ ವಿನಂತಿ ಮಾಡಿದ್ದೇವೆ ಎಂದರು. ಹೋರಾಟಗಾರರಿಗೆ ನೋಟೀಸ್ ಕೊಟ್ಟ ಬಗ್ಗೆ ಮಾಹಿತಿ ಇರಲಿಲ್ಲ. ನಾನು ಕಮಿಷನರ್ ಗೆ ಹೇಳಿದ್ದೇನೆ. ಹೋರಾಟ ಸಹಜ, ಯಾವುದೇ ನೋಟೀಸ್ ಮಾಡಬೇಡಿ ಎಂದಿದ್ದೇನೆ ಎಂದು ನಳಿನ್ ಕುಮಾರ್ ತಿಳಿಸಿದರು.
ಶಾಂತಿಯುತ ಹೋರಾಟಕ್ಕೆ ನನ್ನ ವಿರೋಧ ಇಲ್ಲ, ಆದರೆ ಕಾನೂನು ಕೈಗೆತ್ತಿಕೊಂಡರೆ ಸರ್ಕಾರ ತನ್ನದೇ ಆದ ನಿಯಮದಡಿ ಕ್ರಮ ಕೈಗೊಳ್ಳುತ್ತದೆ ಎಂದ ಅವರು, ಹೆದ್ದಾರಿ ಪ್ರಾಧಿಕಾರ 20 ದಿನ ಸಮಯ ಕೇಳಿದೆ, ನಾವೂ ಸಮಯ ಕೊಡೋಣ ಎಂದು ಸಲಹೆ ಮಾಡಿದರು.
ನಾನು ಹೋರಾಟಗಾರರ ಜೊತೆ ಮಾತನಾಡಿದ್ರೆ ರಾಜಕೀಯ ಬರುತ್ತೆ. ಹಾಗಾಗಿ ಡಿಸಿ ಸೇರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ ಅವರ ಜೊತೆ ಮಾತನಾಡಿಸಿದ್ದೇನೆ. ಈಗ ಮತ್ತೆ ವಿನಂತಿ ಮಾಡ್ತೇನೆ, 20 ದಿನಗಳ ಕಾಲಾವಕಾಶ ಕೊಡಿ ಎಂದು ನಳಿನ್ ಕುಮಾರ್ ಅವರು ಹೋರಾಟಗಾರರಲ್ಲಿ ಮನವಿ ಮಾಡಿದರು.
ತರಾತುರಿಯ ಹೋರಾಟದಿಂದ ತೊಂದರೆಯಾದರೆ ಹಾಗೂ ಕಾನೂನು ಕೈಗೆತ್ತಿಕೊಂಡರೆ ಮುಂದೆ ಆಗುವ ಅನಾಹುತಕ್ಕೆ ಅವರೇ ಹೊಣೆಯಾಗುತ್ತಾರೆ ಎಂದ ಸಂಸದರು, ನಾನು ಟೋಲ್ ಗೇಟ್ ತೆಗೆಯಲು ಕಠಿಬದ್ದನಾಗಿದ್ದೇನೆ, ತೆಗೆದೇ ತೆಗೆಸ್ತೀನಿ. ಆದರೆ ಕಾನೂನು ಸಮಸ್ಯೆ ಕಾರಣ ತಕ್ಷಣಕ್ಕೆ ಟೋಲ್ ಗೇಟ್ ತೆರವು ಕಷ್ಟವಾಗಿದೆ. ಹೀಗಾಗಿ 20 ದಿನಗಳ ಕಾಲ ಹೋರಾಟ ಮುಂದೂಡಿ ಎಂದು ಕೋರಿದರು.







































































