ಬೆಳಗಾವಿ: ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಪಕ್ಷ ಶಿಸ್ತು ಕ್ರಮ ಕೈಗೊಳ್ಳುತ್ತದೆಯೇ? ಇಂಥದ್ದೊಂದು ಸುಳಿವನ್ನು ರಾಜ್ಯ ಬಿಜೆಪಿ ಉಸ್ತುವಾರಿ ನಾಯಕ ಅರುಣ್ ಸಿಂಗ್ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದ ಅರುಣ್ ಸಿಂಗ್, ಶಾಸಕರಾದ ಅರವಿಂದ್ ಬೆಲ್ಲದ್ ಹಾಗೂ ಯತ್ನಾಳ್ ಅವರು ಬಿಜೆಪಿ ನಾಯಕರಲ್ಲ ಎಂದು ಹೇಳಿಕೆ ನೀಡಿ ಕಮಳ ಪಾಳಯದಲ್ಲಿ ತಳಮಳ ಸೃಷ್ಟಿಸಿದ್ದರು. ಈ ಹೇಳಿಕೆ ಬಗ್ಗೆ ಪಂಚಮಸಾಲಿ ಲಿಂಗಾಯತ ಸಮುದಾಯದಲ್ಲಿ ಆಕ್ರೋಶದ ಅಲೆ ಎದ್ದರೆ, ಕಾಂಗ್ರೆಸ್ ಪಾಳಯವು ಟೀಕಾಸ್ತ್ರ ಪ್ರಯೋಗಿಸಲಾರಂಭಿಸಿದೆ.
ಈ ನಡುವೆ, ಸೋಮವಾರ ಮತ್ತೆ ಯತ್ನಾಳ್ ವಿರುದ್ದ ಅರುಣ್ ಸಿಂಗ್ ಗುಡುಗಿದ್ದಾರೆ. ಚಿಕ್ಕೋಡಿ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಯತ್ನಾಳ್ ವಿರುದ್ಧ ಕ್ರಮ ಏಕಿಲ್ಲ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದರು. ನೀವು ಕ್ರಮ ಕೈಗೊಳ್ಳಲು ಬಯಸುತ್ತೀರಾ? ಕ್ರಮ ಕೈಗೊಳ್ಳೋಣ ಎಂದು ತಿಳಿಸಿದರು.
ಬೆಳಗಾವಿಯ ಬಿಜೆಪಿಯಲ್ಲಿ ಯಾವುದೇ ಜಗಳಗಳಿಲ್ಲ; ಎಲ್ಲರೂ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದೂ ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.







































































