ದಾವಣಗೆರೆ: ಜಗಳೂರು ತಾಲ್ಲೂಕಿನ 57 ಕೆರೆ ತುಂಬಿಸುವ ಯೋಜನೆ ಪೂರ್ಣಗೊಂಡಿದ್ದು, ಜೂನ್-ಜುಲೈ ಮಾಹೆಯೊಳಗೆ ನೀರನ್ನು ತುಂಬಿಸಿ, ಮಧ್ಯ ಕರ್ನಾಟಕದಲ್ಲಿ ನೀರಾವರಿಯ ಕ್ರಾಂತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಜಗಳೂರು ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ನಾಯಕರಾದ ಬಿ.ಎಸ್.ಯಡಿಯೂರಪ್ಪನವರು ಕೃಷ್ಣಾ ಮೇಲ್ದಂಡೆ ಯೋಜನೆ ಕೈಗೊಳ್ಳಲು 2008 ರಲ್ಲಿ ಯೋಜನೆಯನ್ನು 3 ಹಂತದಲ್ಲಿ ಅನುಷ್ಠಾನಗೊಳಿಸಲು ಹಣ ಬಿಡುಗಡೆ ಮಾಡಿದರು. ಜಗಳೂರು ತಾಲ್ಲೂಕಿಗೆ ನೀರನ್ನು ತರುವ ಒತ್ತಾಸೆಯಿಂದ 2.4 ಟಿಎಂಸಿ ನೀರನ್ನು ಕೊಡಲು ತೀರ್ಮಾನಿಸಿದರು. ಸುಮಾರು 18 ಸಾವಿರ ಹೆಕ್ಟೇರ್ ಪ್ರದೇಶದಕ್ಕೆ ನೀರಾವರಿ ಸೌಲಭ್ಯ ದೊರೆಯುತ್ತದೆ. 9 ಕೆರಗಳನ್ನು ತುಂಬಿಸಲಾಗಿದೆ. ಬರಡು ನಾಡನ್ನು ಜಲನಾಡನ್ನಾಗಿ ಮಾಡುವ ಸಂಕಲ್ಪವನ್ನು ಸಾಧಿಸಲಾಗುತ್ತಿದೆ ಎಂದರು.
ಭದ್ರಾ ಮೇಲ್ದಂಡೆ – ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ:
ದೂರದೃಷ್ಟಿಯ ನಾಯಕರಾದ ನರೇಂದ್ರ ಮೋದಿಯವರು ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿಸುವ ಘೋಷಿಸಲು ತೀರ್ಮಾನವನ್ನು ಸಚಿವ ಸಂಪುಟದಲ್ಲಿ ಕೈಗೊಳ್ಳಲಿದ್ದಾರೆ. ಈ ಯೋಜನೆಗೆ ಕೇಂದ್ರ ಸರ್ಕಾರ 16 ಸಾವಿರ ಕೋಟಿ ರೂ. ಮಂಜೂರು ಮಾಡಲಿದೆ. ಇದರಿಂದ ಚಿತ್ರದುರ್ಗ ಬ್ರ್ಯಾಂಚ್ ಕೆನಾಲ್, ತುಮಕೂರು ಬ್ರ್ಯಾಂಚ್ ಕೆನಾಲ್, 337 ಕೆರೆ ತುಂಬಿಸುವ ಯೋeನೆಯನ್ನು ಕೈಗೊಳ್ಳಲಾಗುವುದು ಎಂದರು.
ಮಧ್ಯಕರ್ನಾಟಕಕ್ಕೆ ನೀರಾವರಿಯ ಜೊತೆಗೆ ಕೈಗಾರಿಕೆಯ ಅಭಿವೃದ್ಧಿ ಮಾಡಲಾಗುವುದು. ರೈತರ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಬೇಕು, ಕೈಗಾರಿಕೆಗಳ ಮೂಲಕ ಜನರ ಕೈಗೆ ಉದ್ಯೋಗ ದೊರೆಯಬೇಕು, ದಾವಣಗೆರೆ, ಹಾವೇರಿ, ಉತ್ತರ ಕನ್ನಡ, ಧಾರವಾಡ ಬೆಳಗಾವಿ ಜಿಲ್ಲೆಗಳಲ್ಲಿ ಕೈಗಾರಿಕಾ ಟೌನ್ಶಿಪ್ಗಳನ್ನು ಮುಂಬೈ- ಚೆನ್ನೈ ಕಾರಿಡಾರ್ ಆಧಾರದಲ್ಲಿ ಆಗಲಿದೆ. ಒಂದು ಕಡೆ ಕೃಷಿಯ ಕ್ರಾಂತಿ ಮತ್ತೊಂದೆಡೆ ಕೈಗಾರಿಕಾ ಕ್ರಾಂತಿಯನ್ನು ಮಾಡಿ ಮಧ್ಯ ಕರ್ನಾಟಕದ ಭವ್ಯ ಭವಿಷ್ಯವನ್ನು ನಮ್ಮ ಸರ್ಕಾರ ಬರೆಯಲಿದೆ ಎಂದರು.
ಮಧ್ಯ ಕರ್ನಾಟಕ ಇದಯವರೆಗೂ ನಿರ್ಲಕ್ಷ್ಯಕ್ಕೆ ಒಳಪಟ್ಟಿತ್ತು. ಕೇವಲ ಘೋಷಣೆ ಮಾಡಿದರು. ಯಾವ ದೊಡ್ಡ ಕೆಲಸಗಳನ್ನು ಇಲ್ಲಿ ಪ್ರಾರಂಭ ಮಾಡಿರಲಿಲ್ಲ. ಇದ್ದಂತಹ ಯೋಜನೆಗಳನ್ನು ಪೂರ್ತಿ ಮಾಡಲು ಅವರಿಗೆ ಆಸಕ್ತಿ ಇಲ್ಲ. ವಿರೋಧ ಪಕ್ಷಗಳು ಜನರನ್ನು ಬರೀ ಮತ ಬ್ಯಾಂಕ್ ಮಾಡಿಕೊಂಡಿದ್ದರು. ನಾವು ಪ್ರಾರಂಭ ಮಾಡಿದ್ದೇವೆ ಎಂದು ಸುಳ್ಳಿನ ಕಂತೆಯನ್ನು ಹೇಳುತ್ತಾರೆ. ಯಾರು ಮಾಡಿದ್ದು ಎಂದು ನಿಮ್ಮ ಕಣ್ಣ ಮುಂದೆ ಇದೆ. ಈ ಮಧ್ಯ ಕರ್ನಾಟಕವನ್ನು ಶಿಕ್ಷಣ, ಆರೋಗ್ಯ, ಕೈಗಾರಿಕೆ, ಕೃಷಿ ಕ್ಷೇತ್ರಗಳಲ್ಲಿ ಸಮಗ್ರವಾಗಿ ಅಭಿವೃದ್ಧಿ ಮಾಡಬೇಕೆಂದು ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ. ಬರುವ ದಿನಗಳಲ್ಲಿ ಚಿತ್ರದುರ್ಗಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿದೆ. ದಾವಣಗೆರೆಯಲ್ಲಿಯೂ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜನ್ನು ನಿರ್ಮಾಣ ಮಾಡುತ್ತಿದ್ದೇವೆ. ತುಮಕೂರು, ದಾವಣಗೆರೆ ರೈಲ್ವೆಗೆ ಅಡಿಗಲ್ಲನ್ನು ಕೇಂದ್ರ ಸಚಿವರಿಂದ ಪ್ರಾರಂಭಿಸಲಾಗುವುದು. ಇದಾದರೆ ಆರ್ಥಿಕ ಕ್ರಾಂತಿ ಈ ಭಾಗದಲ್ಲಿ ಆಗಲಿದೆ. ಮಧ್ಯ ಕರ್ನಾಟಕದ ಬಗ್ಗೆ ಅತ್ಯಂತ ಕಳಕಳಿಯಿರುವ ಸರ್ಕಾರ ನಮ್ಮದು. ಯಾವುದೇ ಕಾರಣದಿಂದಲೂ ಈ ಭಾಗ ಹಿಂದುಳಿಯಬಾರದು ಎಂದು ಹತ್ತು ಹಲವು ಮಹತ್ವಾಕಾಂಕ್ಷಿ ಯೋಜನೆಯನ್ನು ಈ ಭಾಗಕ್ಕೆ ತರುತ್ತಿದ್ದೇವೆ ಎಂದರು.
ಈ ಬಾರಿಯ ಬಜೆಟ್ ರೈತರ ಪರವಾದ ಬಜೆಟ್. ರೈತರಿಗೆ ರೈತಶಕ್ತಿ ಯೋಜನೆ, ನಂದಿನಿ ಕೃಷಿ ಅಭಿವೃದ್ಧಿ ಬ್ಯಾಂಕ್ ಇಡೀ ದೇಶದಲ್ಲಿ ಪ್ರಥಮವಾಗಿ ಪ್ರಾರಂಭಿಸಲಾಗಿದೆ. 500 ಕೋಟಿ ರೂ.ಗಳ ವೆಚ್ಚದಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ಸ್ವಯಂ ಉದ್ಯೋಗಕ್ಕೆ ನೆರವು, ಯುವಕರಿಗೆ ಉದ್ಯೋಗ ನೀಡಲು ಹೆಚ್ಚಿನ ಒತ್ತು ನೀಡಲಾಗಿದೆ. ನಮ್ಮದು ಸೂಕ್ಷ್ಮ ಬಜೆಟ್. ಎಲ್ಲೆಲ್ಲಿ ನೊಂದವರಿದ್ದಾರೆ, ಅವರ ನೋವನ್ನು ಕಡಿಮೆ ಮಾಡುವ ವಿಶೇಷ ಬಜೆಟ್ ಮಂಡಿಸಿದ್ದೇವೆ. ಈಗಾಗಲೇ ಇವುಗಳ ಅನುಷ್ಠಾನಕ್ಕೆ ಆದೇಶಗಳನ್ನು ಹೊರಡಿಸಲಾಗಿದೆ. ರೈತರ ಮಕ್ಕಳಿಗೆ ರೈತ ವಿದ್ಯಾ ನಿಧಿ ಯೋಜನೆ, ಎಸ್.ಸಿ ಎಸ್.ಟಿ ಸಮುದಾಯಕ್ಕೆ 75 ಯೂನಿಟ್ ಉಚಿತ ವಿದ್ಯುತ್, ಮನೆ ಕಟ್ಟಲು ನೀಡುತ್ತಿದ್ದ 1.75 ಲಕ್ಷ ಅನುದಾನವನ್ನು 2.00 ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಭೂಮಿ ಖರೀದಿಗೆ ಇದ್ದ 15 ಲಕ್ಷ ರೂ.ಗಳ ಗರಿಷ್ಠ ಮಿತಿಯನ್ನು 20 ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ವರ್ಗದ ಏಳಿಗೆಗಾಗಿ ದುಡಿಯುವ ಸರ್ಕಾರ ನಮ್ಮದು. ಸರ್ವಸ್ಪರ್ಶಿ, ಸರ್ವವ್ಯಾಪಿ, ಎಲ್ಲರನ್ನೂ ಒಳಗೊಂಡಿರುವ ರಾಜ್ಯ ನಿರ್ಮಿಸುವ ಕಲ್ಪನೆಯನ್ನು ಇಟ್ಟುಕೊಂಡು ನವ ಕರ್ನಾಟಕದಿಂದ ನವಭಾರತ ನಿರ್ಮಿಸಲು ನಾವು ಮುಂದುವರೆಯುತ್ತಿದ್ದೇವೆ ಎಂದರು.