ಪ್ರಕೃತಿ ಸೌಂದರ್ಯದ ಕಣಜ ಈ ಗುಡಿಬಂಡೆ ಕೋಟೆ.. ಇದಕ್ಕೆ ಸುಂದರ ಇತಿಹಾಸವಿದೆ. ಪುರಾಣ ಪ್ರಸಂಗಗಳ ಸನ್ನಿವೇಶಗಳನ್ನೂ ಬೆಸೆದುಕೊಂಡಿದೆ. ಹಾಗಾಗಿ ಯಾತ್ರಿಕರನ್ನು ಸೆಳೆಯುತ್ತಲಿದೆ.
ವಿಶೇಷ ವರದಿ: ನವೀನ್ ಎಸ್.
ಚಿಕ್ಕಬಳ್ಳಾಪುರ: ಗುಡಿಬಂಡೆ ಎಂಬ ಹೆಸರೇ ಸೂಚಿಸುವಂತೆ ಇಡೀ ತಾಲ್ಲೂಕು ಬೆಟ್ಟಗುಡ್ಡಗಳಿಂದ ಆವರಿಸಿಕೊಂಡಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕು ಆಗಿ, ಇಲ್ಲಿನ ನರಸಿಂಹ ದೇವರ ಗುಡ್ಡದ ಮೇಲೆ ಗುಡಿಯಿರುವ ಕಾರಣ ಈ ಸ್ಥಳಕ್ಕೆ ಗುಡಿಬಂಡೆ ಎಂಬ ಹೆಸರು ಬಂತು ಎಂಬ ಪ್ರತೀತಿಯಿದೆ.
ಇದು ಅತ್ಯಂತ ಕಿರಿದಾದ ತಾಲ್ಲೂಕಾಗಿದ್ದರೂ ಗುಡಿಬಂಡೆಗೆ ಸುಮಾರು 400 ವರ್ಷಗಳ ಕುತೂಹಲಭರಿತ ಇತಿಹಾಸವಿದೆ. ಇಲ್ಲಿರುವ ಏಳು ಸುತ್ತಿನ ಕೋಟೆಯ ವಿಷಯಗಳನ್ನು ಕೆದಕುತ್ತ ಹೋದಲ್ಲಿ ಬೈರೇಗೌಡ ಎಂಬ ಪಾಳೇಗಾರನಿಂದ ವಿಶಿಷ್ಟ ಇತಿಹಾಸವು ಅನಾವರಣಗೊಳ್ಳುತ್ತ ಸಾಗುತ್ತದೆ.
ಗುಡಿಬಂಡೆಯ ಸುರಸದ್ಮಗಿರಿ ಕುರಿತು ಬ್ರಹ್ಮಾಂಡ ಪುರಾಣದಲ್ಲಿಯೂ ಉಲ್ಲೇಖವಿದೆ. ಈ ಬಗ್ಗೆ ಕೆಲವು ತಾಳೆ ಓಲೆಗಳ ಆಧಾರಗಳು ದೊರೆತಿವೆ. ಇದರ ಮಾಹಿತಿಯಂತೆ ರೋಮ ಋಷಿ ಮತ್ತು ಯುದಿಷ್ಟರ ನಡುವಿನ ಸಂವಾದ ರೂಪವನ್ನು ಸುರಸದ್ಮಗಿರಿ ಮಹಾತ್ಯಂ ಎಂದು ಹೆಸರಲಾಗಿದೆ.
ಈ ಪುರಾಣ ಪ್ರಕಾರ, ಇದು ದೇವತೆಗಳ ವಾಸಸ್ಥಾನ. ಸುರ ಎಂದರೆ ದೇವತೆಗಳೆಂತಲೂ ಸದ್ಮ ಎಂದರೆ ನಿವಾಸ. ಅದಕ್ಕೆ ಸುರಸದ್ಮಗಿರಿ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಈ ಸುರಸದ್ಮಗಿರಿಯ ಮೇಲೆಯೇ ಏಳು ಸುತ್ತಿನ ಕೋಟೆಯಿದೆ. ಅದರ ನಿರ್ಮಾತೃ ಪಾಳೇಗಾರ ಬೈರೇಗೌಡ ನಿರ್ಮಾಣ ಮಾಡಿದ್ದಾರೆ ಎಂಬ ಕುರುಹುಗಳು ಮತ್ತು ಹಿತಿಹಾಸದ ಪುಟಗಳಲ್ಲಿ ಉಲ್ಲೇಖವಿದೆ.
ಲಭ್ಯವಿರುವ ಮಾಹಿತಿ ಪ್ರಕಾರ, ಬೈರೇಗೌಡ 16ನೇ ಶತಮಾನಕ್ಕೆ ಸೇರಿದ ಪಾಳೇಗಾರ. ಬಳ್ಳಾರಿ ಪ್ರಾಂತ್ಯದ ಹಳ್ಳಿಯ ಪಾಳೇಗಾರರ ಮನೆತನಕ್ಕೆ ಸೇರಿದ ಬೈರೇಗೌಡ ಕೆಲ ಭಿನ್ನಾಭಿಪ್ರಾಯಗಳಿಂದ ಗ್ರಾಮಗಳನ್ನು ತೊರೆಯಬೇಕಾಗಿ ಬಂತು. ತನ್ನ ಪಾಲಿಗೆ ಸಿಕ್ಕ ಸಂಪತ್ತು, ಪತ್ನಿ ಮತ್ತು ಮಕ್ಕಳೊಂದಿಗೆ ಪ್ರಶಸ್ತ ಸ್ಥಳವೊಂದನ್ನು ಹುಡುಕುತ್ತ ಹೊರಟಿದ್ದರು. ಆವತಿ ಎಂಬ ಸ್ಥಳಕ್ಕೆ ಬಂದ ಆತ ನೆಲೆಸಲು ನಿರ್ಧರಿಸಿದ. ನಂತರ ಗ್ರಾಮಸ್ಥರು ಆತನಿಗೆ ಗ್ರಾಮ ನೋಡಿಕೊಳ್ಳುವ ಉಸ್ತುವಾರಿ ನೀಡಿದರು. ಆತನ ನಾಲ್ವರು ಮಕ್ಕಳಾದ ದೊಡ್ಡೇಗೌಡ. ಚಿಕ್ಕೇಗೌಡ, ದೇವೇಗೌಡ ಮತ್ತು ಭೈರೇಗೌಡ ಶೌರ್ಯ ಮತ್ತು ಸಾಹಸಗಳಿಂದ ತಮ್ಮದೇ ಪ್ರಾಂತ್ಯಗಳನ್ನು ನಿರ್ಮಿಸಿಕೊಂಡರು. ಪ್ರಾಂತ್ಯ ವಿಸ್ತರಣೆ ಹಾಗೂ ಅಭಿವೃದ್ಧಿ ಮಾಡುತ್ತಾ ಬಯಲು ಸೀಮೆಯಲ್ಲಿ ಹಲವು ಬೆಳವಣಿಗೆಗೆ ಮುನ್ನುಡಿ ಬರೆದಿದ್ದರಿಂದ ಜನರಿಂದ ಪ್ರಶಂಸೆಗೆ ಪಾತ್ರವಾಯಿತು.
ಬೈರೇಗೌಡ ನಂತರದ ದಿನಗಳಲ್ಲಿ ಗುಡಿಬಂಡೆಯನ್ನು ಆಂಧ್ರಪ್ರದೇಶದ ಪೆನುಗೊಂಡ ಅರಸರಿಂದ 1,200 ವರಹಗಳಿಗೆ ಖರೀದಿಸಿ ತನ್ನದಾಗಿಸಿಕೊಂಡರು. ಬಹುತೇಕ ಕನ್ನಡಿಗರೆ ಇದ್ದಿದ್ದರಿಂದ ಪ್ರಜೆಗಳ ಅಪೇಕ್ಷೆಯಂತೆ ಖರೀದಿ ಮಾಡಿದ ಗುಡಿಬಂಡೆಯನ್ನ ಗಡಿ ಜಿಲ್ಲೆಯ ಭದ್ರ ಬುನಾದಿಯನ್ನ ಹಾಕಿ ಶತ್ರುಗಳು ದಾಳಿ ಮಾಡದಂತೆ ತಡೆಯಲು ಮತ್ತು ಭದ್ರತೆ ಕಾಯ್ದುಕೊಳ್ಳಲು ಊರಿನ ಸುತ್ತ, ಕೋಟೆ, ಕಂದಕಗಳನ್ನು ನಿರ್ಮಿಸಿದರು.
ಸುರಸದ್ಮಗಿರಿಯ ಮೇಲೆ ಏಳು ಸುತ್ತಿನ ಭದ್ರವಾದ ಕೋಟೆಯನ್ನು ನಿರ್ಮಿಸಿದರು. ಆತನ ನಿರ್ದಿಷ್ಟ ಕಾಲಾವಧಿಯನ್ನು ತಿಳಿಸುವ ಶಿಲಾಶಾಸನ ಅಲ್ಲಿ ಸಿಕ್ಕಿಲ್ಲ. ಆದರೂ ಭದ್ರತಾ ವ್ಯವಸ್ಥೆ ಮಾತ್ರ ಅತ್ಯಂತ ಚಾಕಚಕ್ಯತೆ ಮತ್ತು ಅಚ್ಚರಿಯಿಂದ ಕೂಡಿತ್ತು ಎಂದು ಹಿರಿಯರು ಹೇಳುತ್ತಾರೆ.
ಶತ್ರುಗಳ ಚಲನವಲನ ಗಮನಿಸಲೆಂದೇ ಕೋಟೆ ಮತ್ತು ಬಂಡೆಗಳಲ್ಲಿ ರಂಧ್ರಗಳನ್ನು ಕೊರೆಯಲಾಗಿದೆ. ಆರನೇ ಸುತ್ತಿನ ಕೋಟೆಯಲ್ಲಿ ಶತ್ರುಗಳನ್ನು ಕೂಡಿ ಹಾಕಲು ನೆಲಮನೆ ಮತ್ತು ಪಾಳೇಗಾರನ ಆಸ್ಥಾನ ನರ್ತಕಿಯದೆಂದು ಹೇಳಲಾಗುವ ಗೃಹವೊಂದನ್ನು ನಿರ್ಮಿಸಲಾಗಿದೆ. ಈಗ ಇವು ಶಿಥಿಲಗೊಂಡಿದ್ದರೂ ಅವಶೇಷಗಳೂ ನೂರಾರು ಕಥೆಗಳನ್ನು ಸಾರುತ್ತಿವೆ.
ಇನ್ನೊಂದು ಮಾಹಿತಿ ಪ್ರಕಾರ, ಮಹಾರಾಷ್ಟ್ರದ ದಾಳಿಯನ್ನು ತಡೆಗಟ್ಟಲು ಬೈರೇಗೌಡ ಈ ಕೋಟೆ ಕಟ್ಟಿಸಿದ ಎಂಬ ಮಾತಿದೆ. ಬೆಟ್ಟದ ಮೇಲೆ 13 ಕೊಳಗಳು ಮತ್ತು ರಾಮೇಶ್ವರನ ಜ್ಯೋತಿರ್ಲಿಂಗವೂ ಇದೆ. ಸಧ್ಯ ಚಾರಣಿಗರ , ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಗಮನ ಹರಿಸಿದರೆ ಪಳೆಯುಳಿಕೆಗಳನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಘತಕಾಲದ ವೈಭವದ ಭವ್ಯಸ್ಮಾರಕಗಳನ್ನ ಉಳಿಸಿಕೊಳ್ಳ ಬಹುದು ಎಂದು ಇತಿಹಾಸ ತಜ್ಞರ ಅಭಿಪ್ರಾಯ.