ಬೆಂಗಳೂರು; ಮೊಳೆ ಮುಕ್ತ ಮರಗಳು.. ದೇಶದಲ್ಲೇ ಮೊದಲ ಬಾರಿಗೆ ಕಾಲ್ನಡಿಗೆ ಜಾಥ ರಾಜಧಾನಿ ಬೆಂಗಳೂರಿನಲ್ಲಿ ನಡೆಯಿತು. ವಾರಾಂತ್ಯದ ರಜಾದಿನವಾದ ಭಾನುವಾರ ಏರ್ಪಡಿಸಲಾದ ಈ ಜಾಥಾದಲ್ಲಿ ಯುವಜನ ಸಮೂಹ ಪಾಲ್ಗೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೊಳಗಿಸಿದೆ.
ಮನೆಗೊಂದು ಮರ, ಊರಿಗೊಂದು ವನ ಎಂಬುದನ್ನು ನಾವೆಲ್ಲರೂ ಕೇಳಿದ್ದೇವೆ. ದುರಾಸೆ, ಖರ್ಚಿಲ್ಲದೇ ಜಾಹೀರಾತಿನಿಂದ ನಗರಗಳಲ್ಲಿ ಮರಗಳಿಗೆ ಮೊಳೆ ಹೊಡೆದು ವಿರೂಪಗೊಳಿಸಲಾಗುತ್ತಿದೆ. ವ್ಯಾಪಾರಿ ಮನೋಭಾವದ ಕೆಲವರ ಈ ಕೃತ್ಯಗಳಿಂದಾಗಿ ಅಸಂಖ್ಯ ಮರಗಳು ಹಾಳಾಗಿವೆ. ಇಂತಹ ಸಂದರ್ಭದಲ್ಲಿ ಈ ಜಾಥಾ ‘ಮರಗಳಿಗೂ ಒಂದು ಜೀವವಿದೆ’ ಎಂಬುದನ್ನು ಸಾರಿತು.
ಮರಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಸಂಬಂಧ ‘ಮೊಳೆ ಮುಕ್ತ ಮರ’ ಎಂಬ ಘೋಷಣೆಯೊಂದಿಗೆ ಬೆಂಗಳೂರು ಹುಡುಗರ ತಂಡ ಎಂ.ಜಿ ರೋಡ್ ಬಾಲ ಭವನದಿಂದ – ಬಿ.ಬಿ.ಎಂ.ಪಿ ಕೇಂದ್ರ ಕಛೇರಿಯವರೆಗೂ ವಾಕಥಾನ್ ಆಯೋಜಿಸಿದ್ದರು.
ಈ ಕಾರ್ಯಕ್ರಮದಲ್ಲಿ ರೈಲ್ವೆ ವಿಭಾಗದ ಎ.ಡಿ.ಜಿ. ಪಿ ಭಾಸ್ಕರ್ ರಾವ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್. ಶ್ರೀ ದಾರೀ ಆಂಜನೇಯ ಸ್ವಾಮಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ಅಂಬರೀಷ್.ಜೀ ಸೇರಿದಂತೆ ಹಲವು ಗಣ್ಯರು, 25ಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಕಾರ್ಯಕರ್ತರು ಭಾಗಿಯಾದರು.
ಮರಗಳಿಗೆ ಮೊಳೆ ಹೊಡೆಯುವ ಹೀನ ಕೃತ್ಯವನ್ನು ಮಾಡದೆ, ಇದರ ಬಗ್ಗೆ ಅರಿವು ಮೂಡಿಸಿ, ಇದರಿಂದ ಆಗುವ ಕಾನೂನು ಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಈ ವಾಕಥಾನ್’ನ ಉದ್ದೇಶವಾಗಿದೆ ಎಂದು ಆಯೋಜಕರು ಹೇಳಿದರು.