ಹಾನಗಲ್ ಅತ್ಯಾಚಾರ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಇಸಿದ್ದಾರೆ.
ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಪ್ರಯುಕ್ತ, ಜನವರಿ 14 ರಿಂದ ದೇವಾಲಯಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಅದರಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರ ನೇತೃತ್ವದಲ್ಲಿ ಜಯನಗರ 4 ನೇ ಹಂತದ ಗಣೇಶ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಈ ವೇಳೆ ಮಾತನಾಡಿದ ಆರ್.ಅಶೋಕ್, ಹಾನಗಲ್ ಅತ್ಯಾಚಾರ ಪ್ರಕರಣ ಗಂಭೀರವಾದ ಕೇಸ್, ಅಲ್ಲಿನ ರಾಜಕೀಯ ನಾಯಕರು ಭೇಟಿಗೆ ಅವಕಾಶ ಮಾಡಿಕೊಡುತ್ತಿಲ್ಲ. ಪೊಲೀಸರ ಮೂಲಕ ಅವರನ್ನು ಬೇರೆ ಕಡೆ ಕಳುಹಿಸಲಾಗಿದೆ. ಈ ಪ್ರಕರಣವನ್ನು ಮುಚ್ಚಿಹಾಕುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ದೂರಿದರು.
ನೈತಿಕ ಪೊಲೀಸ್‌ಗಿರಿ, ದಾದಾಗಿರಿ, ದೌರ್ಜನ್ಯ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆಯೇ ಇಲ್ಲವಾಗಿದೆ. ಬೆಳಗಾವಿಯಲ್ಲಿ ಬೆತ್ತಲೆ ಮಾಡಿದ ಪ್ರಕರಣವೂ ಹೀಗೆಯೇ ಆಗಿದೆ. ಸರ್ಕಾರ ಸತ್ತುಹೋಗಿದೆ ಎಂದು ಜನರು ಅಂದುಕೊಂಡಿದ್ದಾರೆ. ಬರಗಾಲ ಹಾಗೂ ಕಾನೂನು ಸುವ್ಯವಸ್ಥೆ ಕುಸಿತದ ವಿರುದ್ಧ ಹೋರಾಟ ಮಾಡುತ್ತೇವೆ. ನಾನು ಎಲ್ಲ ಜಿಲ್ಲೆಗಳಲ್ಲಿ ಓಡಾಡಿ ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ ಎಂದರು.
ರಾಜ್ಯದ ಎಲ್ಲಾ ಭಾಗಗಳಲ್ಲಿ ದೇವಾಲಯಗಳಲ್ಲಿ ಶುದ್ಧೀಕರಣ ಕಾರ್ಯ ನಡೆಯುತ್ತಿದೆ. ಜನವರಿ 22 ರಂದು ವಿಶೇಷ ಪೂಜೆ ನಡೆಯಲಿದೆ. ಪದ್ಮನಾಭನಗರ ಶಾಸಕರ ಕಚೇರಿಯ ಬಳಿ ದೇವಸ್ಥಾನ ನಿರ್ಮಿಸುತ್ತಿದ್ದು, ಅಲ್ಲಿಯೇ ಶ್ರೀರಾಮ ಸೀತೆಗೆ ಪೂಜೆ ಸಲ್ಲಿಸಲಾಗುವುದು ಎಂದು ತಿಳಿಸಿದರು.






































































