ಬಾಗಲಕೋಟೆ: ಮಠಗಳಿಗೆ ಸಕಾ೯ರ ನೀಡುವ ಅನುದಾನದಲ್ಲಿ ಶೇ.30ರಷ್ಟು ಕಮಿಷನ್ ನೀಡಬೇಕಿದೆಯಂತೆ. ರಾಜ್ಯ ಸರ್ಕಾರದ ಹಾಗೂ ವ್ಯವಸ್ಥೆಯ ವಿರುದ್ದ ಮಠಾಧಿಪತಿಗಳೇ ಆಕ್ರೋಶ ಹೊರಹಾಕಿದ್ದಾರೆ. ಹಿಂದೂ ದೇಗುಲ, ಮಠಗಳ ರಕ್ಷಣೆಗೆ ಪಣ ತೊಟ್ಟು ಹೋರಾಟ ನಡೆಸಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದಿರುವ ಕಾರ್ಯಕರ್ತರು ಈ ಸರ್ಕಾರದ ಆಡಳಿತ ವೈಖರಿ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಂತೆಯೇ ಮಠಾಧಿಪತಿಗಳಿಂದಲೂ ಅಸಮಾಧಾನದ ಮಾತುಗಳು ಕೇಳಿಬಂದಿವೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿಯಲ್ಲಿ ಎಸ್.ಆರ್ ಪಾಟೀಲ್ ನೇತೃತ್ವದಲ್ಲಿ ನಡೆದ ಟ್ರ್ಯಾಕ್ಟರ್ ರ್ಯಾಲಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ, ರಾಜ್ಯ ಸರ್ಕಾರದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಮಠಗಳಿಗೆ ಸರ್ಕಾರ ನೀಡುವ ಅನುದಾನದಲ್ಲಿ ಶೇ.30ರಷ್ಟು ಕಮಿಷನ್ ನೀಡಬೇಕಿದೆ ಎಂಬ ಕಹಿ ಸತ್ಯವನ್ನು ಅವರು ಅನಾವರಣ ಮಾಡಿದರು.
ಅನುದಾನದಲ್ಲಿ ಅಧಿಕಾರಿಗಳು ಕಡಿತ ಮಾಡದೇ ಅನುದಾನ ನೀಡಲು ಸಾಧ್ಯವಿಲ್ಲ ಎನ್ನುತ್ತಾರೆ. ದೆಹಲಿ, ಬೆಂಗಳೂರಿನಂತಹ ಊರಿನಲ್ಲಿ ಐಸ್ಕ್ರೀಂ ಬಿಡುಗಡೆಯಾದರೆ ನಮ್ಮ ಉತ್ತರ ಕರ್ನಾಟಕಕ್ಕೆ ಬರೋದು ಐಸ್ಕ್ರೀಂ ಕಡ್ಡಿ ಮಾತ್ರ ಎಂದು ಶ್ರೀಗಳು ವ್ಯವಸ್ಥೆಯ ಬಗ್ಗೆ ಕಿಡಿಕಾರಿದರು.
ರೊಕ್ಕ ಕಟ್ ಮಾಡದೇ ಅನುದಾನ ಬಿಡುಗಡೆ ಸಾಧ್ಯವಿಲ್ಲ ಅಂತ ಅಧಿಕಾರಿಗಳು ಹೇಳ್ತಾರೆ. ಹೀಗಾಗಿ ಮಠ ಮಾನ್ಯಗಳ ಅನುದಾನದಲ್ಲಿ 30% ಕಡಿತ ಆದ ಮೇಲೆಯೇ ಕಟ್ಟಡ ಆರಂಭವಾಗುತ್ತೆ ಎಂದವರು ದೂರಿದರು.