ಚೆನ್ನೈ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣದ ರಾಜ್ಯವಾದ ತಮಿಳುನಾಡುದಲ್ಲಿ ಮತದಾರರು ಭಾರೀ ಬದಲಾವಣೆಗೆ ಒಲವು ತೋರಿರುವುದು ಪ್ರಾಥಮಿಕ ಫಲಿತಾಂಶಗಳಿಂದ ಸ್ಪಷ್ಟವಾಗುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಜನತೆ ಅಚ್ಚರಿಯ ಫಲಿತಾಂಶಗಳನ್ನು ನೀಡಿದ್ದು, ರಾಜ್ಯ ರಾಜಕೀಯಕ್ಕೆ ಹೊಸ ತಿರುವು ದೊರೆತಿದೆ.
ತೀವ್ರ ಕುತೂಹಲ ಕೆರಳಿಸಿದ್ದ ತಮಿಳುನಾಡಿನಲ್ಲಿ ಹೊಸ ಯುಗದ ಆರಂಭಕ್ಕೆ ಮತದಾರರು ಮುನ್ನುಡಿ ಬರೆದಿದ್ದು, ನಟ ವಿಜಯ್ (Vijay) ನೇತೃತ್ವದ TVK ಭಾರೀ ಮುನ್ನಡೆ ಸಾಧಿಸಿದೆ. ಆಡಳಿತಾರೂಢ DMK ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಹ ಪರಿಸ್ಥಿತಿ ಗೋಚರಿಸುತ್ತಿದೆ.
ಮತ ಎಣಿಕೆ ಆರಂಭವಾದ ಕ್ಷಣದಿಂದಲೇ TVK ಭಾರೀ ಮುನ್ನಡೆ ಕಾಯ್ದುಕೊಂಡಿದ್ದು, ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆಯ ಸಂಚಲನ ಉಂಟಾಗಿದೆ. ಆಡಳಿತಾರೂಢ DMK–ಕಾಂಗ್ರೆಸ್ ಮಿತ್ರಕೂಟ ನಿರೀಕ್ಷೆಗಿಂತಲೂ ಹೆಚ್ಚಿನ ಹಿನ್ನಡೆ ಅನುಭವಿಸುತ್ತಿದ್ದು, ಮೈತ್ರಿಕೂಟದ ಹಲವಾರು ಪ್ರಭಾವಿ ನಾಯಕರು ಪರಾಭವದ ಅಂಚಿನಲ್ಲಿದ್ದಾರೆ.
234 ಸ್ಥಾನಗಳಲ್ಲಿ 105 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ TVK ಮುನ್ನಡೆ ಸಾಧಿಸಿದ್ದು, ಇತಿಹಾಸದಲ್ಲೇ ದೊಡ್ಡ ಸಾಧನೆ ಎಂದು ರಾಜಕೀಯ ವಲಯ ವಿಶ್ಲೇಷಿಸುತ್ತಿದೆ. ಈವರೆಗೆ ಪ್ರತಿಪಕ್ಷವಾಗಿದ್ದ AIADMK 70 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುಂದಿದೆ. DMK ಮೈತ್ರಿಕೂಟದ 50ಕ್ಕೂ ಹೆಚ್ಚು ಅಭ್ಯರ್ಥಿಗಳು ಮಾತ್ರ ಮುನ್ನಡೆಯಲ್ಲಿದ್ದಾರೆ.
ಪ್ರಸ್ತುತ ಬಲಾಬಲದಿಂದ ನೋಡಿದರೆ, TVK ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವ ಸಾಧ್ಯತೆ ದುರ್ಬಲವಾಗಿ ಕಾಣುತ್ತಿದೆ. ಸರ್ಕಾರ ರಚಿಸಲು ಕೆಲವು ಸ್ಥಾನಗಳ ಕೊರತೆ ಎದುರಾಗಬಹುದು. ಇಂತಹ ಸಂದರ್ಭದಲ್ಲಿ AIADMK ಬೆಂಬಲ ಪಡೆಯಲು TVK ಬೆಂಬಲಿಗರು ತೆರೆಮರೆಯಲ್ಲಿ ಚಟುವಟಿಕೆ ಆರಂಭಿಸಿರುವ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.
ರಾಜ್ಯದಲ್ಲಿ ಉದಯಿಸುತ್ತಿರುವ ಈ ರಾಜಕೀಯ ಸಮೀಕರಣಗಳು ಮುಂದಿನ ಗಂಟೆಗಳಲ್ಲಿ ಇನ್ನಷ್ಟು ಸ್ಪಷ್ಟವಾಗಲಿವೆ.






































































