ಮಿಥುನ್ ರೈ ‘ಯೂ-ಟರ್ನ್’ ಯಾಕೆ? ಅವರಿಗೆ ಎದುರಾದ ಸವಾಲುಗಳಾದರೂ ಏನು? ಅವರಿಗೆ ಎದುರಾದ ಆತಂಕವಾದರೂ ಏನು?
ಬೆಂಗಳೂರು: ಪ್ರದೇಶ ಕಾಂಗ್ರೆಸ್‌ನಲ್ಲೀಗ ಮಿಥುನ್ ರೈ ಅವರದ್ದೇ ಮಾತು. ಅವರು ಕಾಂಗ್ರಸ್ ಯುವ ಸೈನ್ಯದ ಅಧಿಪತಿಯಾಗುವ ಹುಮ್ಮಸ್ಸಿನಲ್ಲಿದ್ದರೂ ಕೊನೆಯ ಕ್ಷಣದಲ್ಲಿ ರಣಾಂಗಣದಿಂದ ಹಿಂದೆ ಸರಿದು ಅಚ್ಚರಿಗೆ ಕಾರಣರಾಗಿದ್ದಾರೆ.
ಮಿಥುನ್ ರೈ ಕರಾವಳಿ ಕರ್ನಾಟಕದ ಯುವ ನಾಯಕ. ಕಾಂಗ್ರೆಸ್ ಪಕ್ಷದಲ್ಲಿ ತಮ್ಮದೇ ಅದ ವರ್ಚಸ್ಸನ್ನು ಹೊಂದಿರುವ ಯುವ ರಾಜಕೀಯ ಪ್ರತಿಭೆ. ಕರಾವಳಿಯಲ್ಲಿ ಹಿಂದೂತ್ವದ ಪ್ರಾಬಲ್ಯವಿದ್ದರೂ ಕೇಸರಿ ಪಾಳಯದಲ್ಲೂ ಒಮ್ಮೊಮ್ಮೆ ಮಿಥುನ್ ಆಕರ್ಷಣೆ ಇರುವುದುಂಟು. ಕಾಂಗ್ರಸ್ ಎಂಬ ಪಕ್ಷದ ಸ್ಪರ್ಷ ಬಿಟ್ಟರೆ ಕರಾವಳಿಯಲ್ಲಿನ ಭವಿಷ್ಯದ ನಾಯಕ ಎಂಬುದು ಮಂಗಳೂರಿನ ಹಿಂದೂ ಯುವಕರ ಅಭಿಮತವೂ ಹೌದು.
ಪ್ರಸ್ತುತ ಕೆಪಿಸಿಸಿ ದಂಡನಾಯಕ ಡಿ.ಕೆ.ಶಿವಕುಮಾರ್ ಅವರ ಪರಮಾಪ್ತರಾಗಿರುವ ಮಿಥುನ್ ರೈ ಅಷ್ಟೊಂದು ಪ್ರಭಾವಿಯಾಗಿದ್ದರೂ, ವರ್ಚಸ್ವೀ ನಾಯಕನಾಗಿದ್ದರೂ ಯುವ ಕಾಂಗ್ರೆಸ್ ಅಖಾಡದಿಂದ ಹಿಂದೆ ಸರಿದಿರುವುದಾದರೂ ಏತಕ್ಕೆ ಎಂಬುದು ಕೈ ನಾಯಕರಿಗೂ ಕೌತುಕದ ಪ್ರಶ್ನೆಯಾಗಿ ಕಾಡಿದೆ.
ಶಾಸಕ ಹ್ಯಾರಿಸ್ ಪುತ್ತನಿಗೆ ವರದಾನ?
ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಏರ್ಪಟ್ಟ ಚುನಾವಣಾ ಅಖಾಡದಲ್ಲಿ ಪ್ರಬಲ ಸ್ಪರ್ಧಿಗಳಾಗಿ ಗಮನ ಸೆಳೆದಿರುವುದು ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪ್ಪಾಡ್ ಹಾಗೂ ಮಿಥುನ್ ರೈ. ಈ ಪೈಕಿ ಪರಿಸ್ಥಿತಿಯು ವರವಾಗಿದ್ದುದೂ ಮಿಥುನ್‌ಗೆ. ಆದರೆ ಮಿಥುನ್ ನಿಗೂಢ ಕಾರಣಕ್ಕಾಗಿ ಕಣದಿಂದ ವಿಮುಖರಾದರು ಎಂದು ಕೈ ನಾಯಕರು ಹೇಳುತ್ತಾರೆ.
ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಚುನಾವಣೆಗೆ ಒಂದು ದಿನ ಬಾಕಿ ಇರುವಾಗ ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ತಮ್ಮು ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ. ಈ ಬಗ್ಗೆ ಬಗೆಬಗೆಯ ವಿಶ್ಲೇಷಣೆಗಳು ಕೇಳಿ ಬರುತ್ತಿರುವಂತೆಯೇ ಮಿಥುನ್ ರೈ ಅವರು ತರಾತುರಿಯಲ್ಲೇ ಪ್ರತಿಕ್ರಿಯೆ ನೀಡಿ ಅಲ್ಲೂ ಅಚ್ಚರಿಗೆ ಕಾರಣರಾಗಿದ್ದಾರೆ. ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿರುವ ಮಿಥುನ್ ರೈ, ತಾವು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಲಹೆಯ ಮೇರೆಗೆ ನಾಮಪತ್ರ ವಾಪಸ್ ಪಡೆದಿರುವುದಾಗಿ ತಿಳಿಸಿದ್ದಾರೆ. ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಅವರು ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
ಈ ನಡುವೆ, ಮಿಥುನ್ ನಿರ್ಗಮನದಿಂದಾಗಿ ಮೊಹಮ್ಮದ್ ನಲಪಾಡ್‌ಗೆ ಅನುಕೂಲವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಅವರಿಗೆ ರಕ್ಷಾ ರಾಮಯ್ಯ, ಎಚ್.ಎಸ್.ಮಂಜುನಾಥ್, ಸಂದೀಪ್ ನಾಯಕ್, ಮೊಹಮ್ಮದ್ ಖಾಲಿದ್ ಮತ್ತು ಭವ್ಯಾ ಒಡ್ಡಿರುವ ಪ್ರಬಲ ಸ್ಪರ್ಧೆಯು ಕೈ ರಣಾಂಗಣದಲ್ಲಿ ಕೌತುಕದ ಸನ್ನಿವೇಶಕ್ಕೆ ಕಾರಣವಾಗಿದೆ.