ಬೆಂಗಳೂರು: ನಾನು ಐದು ವರ್ಷಕ್ಕೊಮ್ಮೆ ಬರುವವನಲ್ಲ, ಕ್ಷೇತ್ರದಲ್ಲಿ ದಿನಂಪ್ರತಿ ಒಂದಿಲ್ಲೊಂದು ಕಾರ್ಯಕ್ರಮ ಮಾಡುತ್ತಾ ಜನತೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದೇನೆ ಎಂದು ಸಹಕಾರ ಸಚಿವರು ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಹೇರೋಹಳ್ಳಿ ವಾರ್ಡ್’ನಲ್ಲಿ ಶ್ರೀ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ದೊಡ್ಡಬಿದರಕಲ್ಲು ವಾರ್ಡ್‌ನಲ್ಲಿ ಶ್ರೀ ಸೋಮನಾಥ ಸ್ವಾಮೀಜಿಯವರ ಸಮ್ಮುಖದಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ಪ್ರಮಾಣಪತ್ರ ವಿತರಣೆ ಮಾಡಿ ಮಾತನಾಡಿದರು. ಕಣ್ಣೀರು ಹಾಕುವವರಿಗೆ ಮರುಳಾಗಬೇಡಿ. ಐದು ವರ್ಷಕ್ಕೆ ಒಮ್ಮೆ ಬರುವವರಿಗಿಂತ ಸತತವಾಗಿ ಕ್ಷೇತ್ರದ ಜನತೆಯ ಜೊತೆ ಇರುವವರನ್ನು ಬೆಂಬಲಿಸಿ. ಕೋವಿಡ್ ಸಂಕಷ್ಟದ ಸಮಯದಲ್ಲಿ ವಿರೋಧ ಪಕ್ಷದವರು ಒಂದು ಮನೆಗೆ ಹೋಗಿ ಒಬ್ಬರ ಕಷ್ಟ ಆಲಿಸಲಿಲ್ಲ. ಈಗ ಕಣ್ಷೀರು ಹಾಕುತ್ತಿದ್ದರೆ ಎಂದರು.
ಕೋವಿಡ್ ಸಮಯದಲ್ಲಿ ಕ್ಷೇತ್ರದಾದ್ಯಂತ ಓಡಾಡಿ ಜನರ ಕಷ್ಟಸುಖದಲ್ಲಿ ಭಾಗಿಯಾಗಿದ್ದೇನೆ. ಆಹಾರ ಸಾಮಾಗ್ರಿಗಳ ಪೂರೈಕೆ, ಲಸಿಕಾ ಅಭಿಯಾನ, ಕೋವಿಡ್ ನಿಂದ ಮೃತಪಟ್ಟ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳುವುದರ ಜೊತೆಗೆ ವೈಯಕ್ತಿಕವಾಗಿ ಧನ ಸಹಾಯ ಮಾಡಿದ್ದೇನೆ. ಸರ್ಕಾರದಿಂದಲೂ ಪರಿಹಾರ ಕಲ್ಪಿಸಿದ್ದೇನೆ ಎಂದು ಹೇಳಿದರು.
ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ ಎಂದರು. ಮೂರು ಬಾರಿ ಶಾಸಕನನ್ನಾಗಿ ಆಯ್ಕೆ ಮಾಡಿದ ಜನತೆಯ ಋಣ ತೀರಿಸುತ್ತಿದ್ದೇನೆ. ಕ್ಷೇತ್ರದ ಜನತೆಯ ಆಶೀರ್ವಾದದಿಂದ ಸಚಿವನಾಗಿ, ರಾಷ್ಟ್ರಪತಿ, ಪ್ರಧಾನಿ ಮೋದಿಜೀ, ಅಮಿತ್ ಶಾ ಅವರ ಪಕ್ಕ ಕೂರುವ ಅವಕಾಶ ಸಿಕ್ಕಿತು ಎಂದರು.
ಸ್ತ್ರೀ ಶಕ್ತಿ ನೋಂದಣಿ ಮಾಡಿದರೆ ಸರ್ಕಾರದ ಸವಲತ್ತು ಸಿಗಲಿದೆ ಎಂಬ ದೃಷ್ಟಿಯಿಂದ ಶಾಸಕರ ಕಚೇರಿ ವತಿಯಿಂದ ಉಚಿತವಾಗಿ ನೋಂದಣಿ ಮಾಡಿಕೊಡಲಾಗುತ್ತಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 2000ಕ್ಕೂ ಅಧಿಕ ಸ್ತ್ರೀ ಶಕ್ತಿ ಸಂಘಗಳನ್ನು ನೋಂದಣಿ ಮಾಡಲಾಗಿದೆ. ಪ್ರತಿದಿನ ಸಂಘಗಳ ನೋಂದಣಿ ಮಾಡಲಾಗುತ್ತಿದೆ ಎಂದು ಹೇಳಿದರು
ಇದೇ ವೇಳೆ, ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿ ಮತ್ತು ದೊಡ್ಡಬಿದರಕಲ್ಲು ವಾರ್ಡ್ ವ್ಯಾಪ್ತಿಯಲ್ಲಿ ಉಚಿತವಾಗಿ ನೋಂದಣಿ ಮಾಡಿಸಲಾಗಿದ್ದ 450ಕ್ಕೂ ಅಧಿಕ ಸ್ತ್ರೀ ಶಕ್ತಿ ಗುಂಪುಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಶ್ರೀ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಮಾತನಾಡಿ, ಎಸ್.ಟಿ.ಸೋಮಶೇಖರ್ ಅವರು ಸಾಮಾನ್ಯ ಜನರ ಕಷ್ಟ ಅರಿತಂಥವರು. ಹೀಗಾಗಿ ಸ್ತ್ರೀ ಸಂಘಗಳಿಗೆ ಉಚಿತ ನೋಂದಣಿ ಮಾಡಿಸುತ್ತಿದ್ದಾರೆ. ಅವರಿಗೆ ಅಭಿನಂದನೆಗಳು ಎಂದರು. ಮಹಿಳಾ ಶಕ್ತಿ ಅತ್ಯಂತ ಪ್ರಬಲವಾದದ್ದು. ಎಲ್ಲಾ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳ ಪಾತ್ರ ಗಮನಾರ್ಹ. ಸ್ತ್ರೀ ಶಕ್ತಿ ಸಂಘಗಳ ಮೂಲಕ ಆರ್ಥಿಕವಾಗಿ ಸಹಾಯವಾಗಲಿದೆ ಎಂದು ಹೇಳಿದರು.
ಇನ್ನೊಂದೆಡೆ, ಸಹಕಾರ ಸಚಿವರು ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಟಿ.ಸೋಮಶೇಖರ್ ಅವರು, ಉಲ್ಲಾಳ ಉಪನಗರ, ಅಂಬೇಡ್ಕರ್ ನಗರದ ನಿವಾಸಿಗಳಿಗೆ 94cc ಹಕ್ಕುಪತ್ರ ವಿತರಣೆ ಮಾಡಿದರು. ಕೆಂಗೇರಿ ಉಪನಗರ ಒಂದನೇ ಮುಖ್ಯರಸ್ತೆ, ಒಂದನೇ ಅಡ್ಡರಸ್ತೆಯಲ್ಲಿ ಪುನೀತ್ ರಾಜಕುಮಾರ್ ಸರ್ಕಲ್ ನಾಮಫಲಕ, ದೊಡ್ಡಗೊಲ್ಲರಹಟ್ಟಿಯಲ್ಲಿ ನೂತನವಾಗಿ ನಿರ್ಮಿಸಿರುವ ಸಮುದಾಯಭವನ ಹಾಗೂ ಮಾಧವನಗರ ನಾಮಫಲಕವನ್ನು ಸಮರ್ಪಣೆ ಮಾಡಿದರು.