ಬೆಂಗಳೂರು: ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿ ನಡೆದ ಸುದೀರ್ಘ ಹೋರಾಟ ರಾಜ್ಯದ ಪಾಲಿಗೊಂದು ಇತಿಹಾಸ. ಈ ಹೋರಾಟದ ನೇತೃತ್ವ ವಹಿಸಿರುವ ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ರಾಜ್ಯದ ಪ್ರಭಾವಿ ಸಮುದಾಯದ ನಡುವೆ ಹೆಗ್ಗುರುತಾಗಿದ್ದಾರೆ. ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಎರಡು ವರ್ಷಗಳ ಹಿಂದೆ ನಡೆದ ‘ಪಂಚಮಸಾಲಿ’ ಹೋರಾಟ
ಪಂಚಮಸಾಲಿ ಲಿಂಗಾಯತ ಸಮುದಾಯವು ರಾಜ್ಯದಲ್ಲಿನ ಪ್ರಭಾವಿ ಸಮುದಾಯ. ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿ ಮತದಾರರೂ ಈ ಸಮುದಾಯದವರೇ. ಹೀಗಿದ್ದರೂ ಸರ್ಕಾರ ತಮ್ಮ ಸಮುದಾಯಕ್ಕ ಸೂಕ್ತ ಮೀಸಲಾತಿ ಕಲ್ಪಿಸಿಲ್ಲ ಎಂಬ ಆಕ್ರೋಶ ಇವರದ್ದಾಗಿತ್ತು. ಈ ಮೀಸಲಾತಿಗಾಗಿ ಸುದೀರ್ಘ ಎರಡೂವರೆ ವರ್ಷ ಕಾಲ ಶ್ರೀಗಳ ನೇತೃತ್ವದಲ್ಲಿ ಹೋರಾಟ ನಡೆಸಲಾಗಿದೆ. ಈ ಸಂಬಂಧ ರಾಜ್ಯವ್ಯಾಪಿ ಸಂಚಾರ, ಸಂಚಲನ ನಡೆದಿದ್ದಷ್ಟೇ ಅಲ್ಲ, ರಾಜಧಾನಿ ಬೆಂಗಳೂರಿನಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯದ ಶಕ್ತಿಪ್ರದರ್ಶನವೇ ನಡೆದಿತ್ತು. ಈ ಶಕ್ತಿ ಪ್ರದರ್ಶನವು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ನಿಬ್ಬೆರಗಾಗಿಸಿತ್ತು.
ಎರಡು ವರ್ಷಗಳ ಹಿಂದೆ ನಡೆದ ‘ಪಂಚಮಸಾಲಿ’ ಹೋರಾಟ
ಇದೀಗ ಈ ಮೀಸಲಾತಿ ಹೋರಾಟದಲ್ಲಿ ಪಂಚಮಸಾಲಿ ಸಮುದಾಯ ದಿಗ್ವಿಜಯ ಸಾಧಿಸಿದೆ. ಈ ಮೀಸಲಾತಿ ಹೋರಾಟ ಮೂಲಕ ಇಡೀ ಸಮುದಾಯಕ್ಕೆ ಶಕ್ತಿ ತುಂಬಿದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ಅಭಿನದನೆಯ ಮಹಾಮಳೆಯಾಗುತ್ತಿದೆ. ಅಭಿವಂದನೆ ಸಲ್ಲಿಸುವ ಸರಣಿ ಸಮಾರಂಭಗಳೂ ಗಮನಸೆಳೆಯುತ್ತಿವೆ.
ಇದೇ ವೇಳೆ, ಬೆಂಗಳೂರಿನ ಸಂಜಯನಗರದಲ್ಲಿ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳ ವಿಜಯೋತ್ಸವ ಸಮಾರಂಭ ಕುತೂಹಲದ ಕೇಂದ್ರಬಿಂದುವಾಯಿತು.
ಏಪ್ರಿಲ್ 9ರಂದು ಸಂಜಯನಗರದ ವೀರಶೈವ ಲಿಂಗಾಯತ ಮಹಾ ವೇದಿಕೆಯ ಕೇಂದ್ರ ಕಚೇರಿ ಆವರಣದಲ್ಲಿ ವೀರಶೈವ ಲಿಂಗಾಯತ ಮಹಾ ವೇದಿಕೆ ಅಧ್ಯಕ್ಷ ಪ್ರಶಾಂತ್ ಕಲ್ಲೂರುರವರ ನೇತೃತ್ವದಲ್ಲಿ ವಿಜಯೋತ್ಸವ ಹಾಗೂ ಪಾದಪೂಜೆಯ ಕೈಂಕರ್ಯ ನೆರವೇರಿತು. ಭಾರೀ ಸಂಖ್ಯೆಯಲ್ಲಿ ಸಮುದಾಯದ ಬಂಧುಗಳು ಭಾಗವಹಿಸಿದ್ದರು.