ಬೆಂಗಳೂರು: ವಿಧಾನಸಭಾ ಚುನಾವಣೆಗೆ ಅಖಾಡ ಸಜ್ಜಾಗಿದ್ದರೂ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಆಗಿಲ್ಲ. ನಾಮಪತ್ರ ಸಲ್ಲಿಕೆಗೆ ಕ್ಷಣಗಣನೆ ನಡೆಯುತ್ತಿದ್ದರೂ ಹುರಿಯಾಳುಗಳ ಆಯ್ಕೆ ವಿಚಾರವು ರಾಜಕೀಯ ಪಕ್ಷಗಳಿಗೆ ಕಬ್ಬಿಣದ ಕಡಲೆ ಎಂಬಂತಾಗಿದೆ.
ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಎರಡೆರಡು ಪಟ್ಟಿಗಳು ಬಿಡುಗಡೆಯಾಗಿದ್ದರೂ ಆಡಳಿತಾರೂಢ ಬಿಜೆಪಿ ಮಾತ್ರ ಮೊದಲನೆ ಪಟ್ಟಿ ಬಿಡುಗಡೆಗೂ ಪ್ರಯಾಸಪಡುತ್ತಿದೆ. ಮಕ್ಕಳು-ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಬೇಕೆಂಬ ಮುಖಂಡರ ಒತ್ತಾಯವೇ ಟಿಕೆಟ್ ಹಂಚಿಕೆ ಬಿಕ್ಕಟ್ಟನ್ನು ಉಲ್ಬಣಗೊಳಿಸಲು ಕಾರಣ ಎಂದು ಹೇಳಲಾಗುತ್ತಿದೆ.
ಈ ನಡುವೆ, ಸೋಮವಾರವೇ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದೆಂದು ಬಿಜೆಪಿ ನಾಯಕರು ಹೇಳುತ್ತಿದ್ದರಾದೂ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಒಮ್ನತಾಭಿಪ್ರಯಕ್ಕೆ ಬರುವಲ್ಲಿ ನಾಯಕರು ವಿಫಲರಾಗಿದ್ದಾರೆ. ಬಿಎಸ್‌ವೈ ಅವರು ತಮ್ಮ ಆಪ್ತರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಹಿಂಬಾಲಕರನ್ನು ಕಣಕ್ಕಿಳಿಸಲು ಶತಪ್ರಯತ್ನ ಮಾಡುತ್ತಿದ್ದಾರೆ. ಈ ಪೈಕಿ ಬಹುತೇಕ ಹಿರಿಯ ನಾಯಕರು ತಮ್ಮ ಕುಟುಂಬ ಸದಸ್ಯರಿಗೆ ಟಿಕೆಟ್ ಕೊಡಿಸಲು ನಡೆಸಿರುವ ಪ್ರಯತ್ನ ವರಿಷ್ಠರಿಗೂ ತಲೆನೋವು ತಂದಿದೆ.
ವರಿಷ್ಠರಿಗೆ ಇವರ ಕುಟುಂಬ ರಾಜ’ಕಾರಣ’ದ ತಲೆನೋವು?
- ಈಶ್ವರಪ್ಪ,
- ಬಿಎಸ್‌ವೈ,
- ಸೋಮಣ್ಣ,
- ಗೋವಿಂದ ಕಾರಜೋಳ,
- ಎಂಟಿಬಿ ನಾಗರಾಜ್
- ಕತ್ತಿ ಸಹೋದರರು,
- ಜಾರಕಿಹೊಳಿ ಸಹೋದರರು
ಈ ನಡುವೆ, ಅಪ್ಪ-ಮಕ್ಕಳ ಟಿಕೆಟ್ ಲಾಭಿ ಬಗ್ಗೆ ಬಿಜೆಪಿ ಹೈಕಮಾಂಡ್ ಗರಂ ಆಗಿದ್ದು, ಈ ಕಾರಣದಿಂದಾಗಿಯೇ ಅಭ್ಯರ್ಥಿಗಳ ಪಟ್ಟಿಗೆ ಅಂಕಿತ ಹಾಕಲು ವರಿಷ್ಠರು ಹಿಂದೇಟು ಹಾಕಿದ್ದಾರೆ ಎನ್ಬಲಾಗಿದೆ. ‘ನಾವು ಜೆಡಿಎಸ್‌ನ ಅಪ್ಪ-ಮಕ್ಕಳ ರಾಜಕಾರಣ ಹಾಗೂ ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣ ಬಗ್ಗೆ ಟೀಕೆ ಮಾಡುತ್ತಿದ್ದು, ಇದೀಗ ಬಿಜೆಪಿಯೂ ಕುಟುಂಬ ರಾಜಕಾರಣದ ಕಳಂಕವನ್ನು ಮೆತ್ತಿಕೊಳ್ಳಬಾರದೆಂಬ ಕಾರಣಕ್ಕಾಗಿ ಇಡೀ ಪಟ್ಟಿಯನ್ನು ಮರು ಪರಿಶೀಲಿಸಲು ಅಮಿತ್ ಶಾ ಕೊಟ್ಟಿರುವ ಸೂಚನೆಯಿಂದಾಗಿ ಪಟ್ಟಿ ಬಿಡುಗಡೆ ವಿಳಂಬವಾಗಿದೆ. ಅಮಿತ್ ಶಾ ಕೊಟ್ಟಿರುವ ಶಾಕ್‌ನಿಂದಾಗಿ ಬಹುತೇಕ ಟಿಕೆಟ್ ಆಕಾಂಕ್ಷಿಗಳ ಎದೆಬಡಿತವೂ ಹೆಚ್ಚಾಗಿದೆ.