ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಆಯವ್ಯಯವು ಆರ್ಥಿಕ ಪ್ರಗತಿಯ ಗುರಿಯಿಲ್ಲದ, ಕೃಷಿಯ ದೂರ ದೃಷ್ಠಿಯಿಲ್ಲ, ಉದ್ಯೋಗ ಸೃಷ್ಠಿ, ಆರೋಗ್ಯ ಮತ್ತು ಆಹಾರ ಭದ್ರತೆ ಬಗ್ಗೆ ಕಿಂಚಿತ್ತೂ ಕಳಕಳಿಯಿಲ್ಲದ ಯಥಾಸ್ಥಿತಿಯ ನಿರರ್ಥಕ ಬಜೆಟ್ ಎಂದು ಜೆಡಿಎಸ್ ಕೋರ್ ಕಮಿಟಿ ಸದಸ್ಯ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ಹೇಳಿದ್ದಾರೆ.
ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಶರವಣ, ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸುವಲ್ಲಿ ಈ ಬಜೆಟ್ ಸಂಪೂರ್ಣವಾಗಿ ವಿಫಲವಾಗಿದೆ. ಈ ಹಿಂದೆ ರೈತರ ಪ್ರತಿಭಟನೆಯ ವೇಳೆ ಕೊಟ್ಟ ಭರವಸೆ ಈಡೇರಿಸದೇ ಮಾತಿಗೆ ತಪ್ಪಿದ ವಿಶ್ವಾಸದ್ರೋಹಿ ಬಜೆಟ್ ಎಂದು ಕೆಂಡಕಾರಿದ್ದಾರೆ.
ಕಳೆದ 2 ವರ್ಷಗಳಿಂದ ದೇಶದ ಜನಸಾಮಾನ್ಯರು, ಬಡವರ ಬದುಕನ್ನು ಹದ್ದಿನಂತೆ ಕುಕ್ಕಿದ ಕೊರೋನಾ ರೋಗದಿಂದಾಗಿ ಆಹಾರ ಮತ್ತು ಆರೋಗ್ಯ ವಲಯ ಹಿಂದೆಂದೂ ಕಾಣದಂತ ಅಭದ್ರತೆಗೆ ಸಿಲುಕಿದ್ದು, ಈ ನಿಟ್ಟಿನಲ್ಲಿ ಬಡವರಿಗೆ ಆಹಾರ ಭದ್ರತೆ ಮತ್ತು ಆರೋಗ್ಯ ಭದ್ರತೆ ನೀಡುವತ್ತ ಈ ಬಜೆಟ್ ನ ಕೊಡುಗೆ ಸಂಪೂರ್ಣ ಶೂನ್ಯ. ನರೇಗಾ ಯೋಜನೆಯ ವ್ಯಾಪ್ತಿ ವಿಸ್ತರಿಸುವಲ್ಲಿ ಈ ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪವಿಲ್ಲವೆಂದ ವಿಷಾದ ವ್ಯಕ್ತ ಪಡಿಸಿದ್ದಾರೆ.
ಸಣ್ಣ ಕೈಗಾರಿಕೆಗಳಿಗೆ ಬಡ್ಡಿ ರಹಿತ ಸಾಲ ಕೊಡಬೇಕು. ಯುವ ಜನರಿಗೆ ಸ್ವಂತ ಶ್ರಮದ ಮೇಲೆ ಸ್ವಾಲಂಬಿಗಳಾಗುವಂತೆ ಮಾಡವಂತಹ ಯೋಜನೆಗಳನ್ನು ಘೋಷಿಸುವುದರಲ್ಲಿ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. 60 ಲಕ್ಷ ಉದ್ಯೋಗ ಸೃಷ್ಠಿಸಲಾಗಿದೆ ಎಂದು ಬಜೆಟ್ ನಲ್ಲಿ ಘೋಷಿಸಿರುವುದು ಹಸಿಸುಳ್ಳು ಎಂದು JDS ಹಿರಿಯ ನಾಯಕ ಟಿ.ಎ.ಶರವಣ ಅವರು ಟೀಕಿಸಿದ್ದಾರೆ.
ಮಹಾತ್ವಾಕಾಂಕ್ಷೆಯ ನದಿ ಜೋಡಣೆಯನ್ನು ಜಾರಿಗೆ ತರುವುದಾಗಿ ಬಜೆಟ್ ನಲ್ಲಿ ಪ್ರಕಟಿಸಲಾಗಿದ್ದು, ರಾಜ್ಯದ ಕೃಷ್ಣಾ – ಗೋದಾವರಿ, ಹಾಗೇ ಕೃಷ್ಣಾ – ಪೆನ್ನಾರ್, ಇದರಂತೆ ರಾಜ್ಯದ ಜೀವನದಿಗೆ ಕಾವೇರಿ – ಪೆನ್ನಾರ್ ನದಿಗಳನ್ನು ಸಂಪರ್ಕಿಸುವ ಯೋಜನೆ ಪ್ರಕಟಿಸಲಾಗಿದೆ. ಆದ್ರೇ ರಾಜ್ಯದ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ಯಾವುದೇ ಹಣಕಾಸು ನೆರವನ್ನು ಘೋಷಿಸಿಲ್ಲ. ಮೇಕೆದಾಟು ಮತ್ತು ಮಹದಾಯಿ ಯೋಜನೆ ಕುರಿತಂತೆ ಯಾವುದೇ ಪ್ರಸ್ತಾಪವಿಲ್ಲ. ಇದು ವಿಷಾದಕರ ಎಂದು ವಾಗ್ದಾಳಿ ನಡೆಸಿದ್ದಾರೆ.
ಖಾಸಗೀ ಬಂಡವಾಳ ಹೂಡಿಕೆಯ ಭರಾಟೆಯಲ್ಲಿ, ಸರ್ಕಾರದ ಸಂಸ್ಥೆಗಳನ್ನು ಪರಬಾರೆ ಮಾಡುವ ಪ್ರಯತ್ನ ಮುಂದುವರೆದಿದ್ದು, NINL ಸಂಸ್ಥೆಯನ್ನು ಖಾಸಗೀಕರಣ ಮಾಡುವುದಕ್ಕಾಗಿ ಸರ್ಕಾರ ಘೋಷಿಸಿರುವುದು ಹಾಸ್ಯಾಸ್ಪದವಾಗಿದೆ. ಹಾಗೇ ಪ್ರಧಾನ ಮಂತ್ರಿಗಳ ಗತಿ ಶಕ್ತಿಯೋಜನೆಗಳಲ್ಲಿ ರಾಜ್ಯಕ್ಕೆ ಕೊಡಬೇಕಾದ ಕೊಡುಗೆಗಳ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಹೆದ್ದಾರಿ ನಿರ್ಮಾಣ ಬಗ್ಗೆಯೂ ವಿವರಗಳಿಲ್ಲ ಮಾಜಿ ಪರಿಷತ್ ಸದಸ್ಯ ಟಿ.ಎ.ಶರವಣ ಹೇಳಿದ್ದಾರೆ.
ಕ್ರಿಪ್ಟೋ ಕರೆನ್ಸಿ ಮಾದರಿಯಲ್ಲಿ ಡಿಜಿಟಲ್ ಕರೆನ್ಸಿ ಸೃಷ್ಠಿಸಿ, ಪರ್ಯಾಯ ಹಣಕಾಸು ವ್ಯವಸ್ಥೆಯನ್ನು ರೂಪಿಸುವ ಸರ್ಕಾರದ ಈ ಯತ್ನದ ಹಿಂದೆ ಭಾರೀ ಮೊತ್ತದ ಡಿಜಿಟಲ್ ತೆರಿಗೆ ಸಂಗ್ರಹಿಸುವ ಉದ್ದೇಶವಿದೆ. ಇದು ಸರ್ಕಾರದ ಬಳಿ ಅಭಿವೃದ್ಧಿಗೆ ಹಣವಿಲ್ಲದೆ, ಹೊಸ ರೀತಿಯ ತೆರಿಗೆ ಸೃಷ್ಠಿಸಲು ಯತ್ನ ನಡೆಸಿದೆ ಎನ್ನುವ ಗುಮಾನಿಗೆ ಎಡೆಮಾಡಿಕೊಡುತ್ತದೆ. ಇದಲ್ಲದೇ ಜಿಎಸ್ಟಿಯಲ್ಲಿ ರಾಜ್ಯದ ತೆರಿಗೆ ಪಾಲನ್ನು ಸಮರ್ಪಕವಾಗಿ ಸಕಾಲಕ್ಕೆ ನೀಡದೇ, ಸತಾಯಿಸುವ ಕೇಂದ್ರ ಸರ್ಕಾರ, ಹೊಸ ಯೋಜನೆಯಲ್ಲಿ ರಾಜ್ಯಗಳಿಗೆ ಬಡ್ಡಿ ರಹಿತ ಸಾಲ ಘೋಷಿಸಿರುವುದು ಆಶ್ಚರ್ಯವೇ ಸರಿ. ಈ ಮೂಲಕವಾಗಿ ರಾಜ್ಯಕೀಯವಾಗಿ ಅನುಕೂಲವಾಗುವ, ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಬೇಕಾಬಿಟ್ಟಿ ಹಣ ಬಿಡುಗಡೆ ಮಾಡುವ ಅವೈಜ್ಞಾನಿಕ ಯೋಜನೆ ಇದಾಗಿದೆ ಎಂದು ಜೆಡಿಎಸ್ ನಾಯಕ ಟಿ.ಎ.ಶರವಣ ಕಿಡಿಕಾರಿದ್ದಾರೆ.