ನವದೆಹಲಿ: ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಮತ್ತಷ್ಟು ಕಗ್ಗಂಟಾಗಿದೆ. ಬಿಎಸ್ವೈ ಕುಟುಂಬ ರಾಜಕಾರಣ ವಿರುದ್ಧ ಸಿಡಿದೆದ್ದಿರುವ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನಿಶ್ಚಿತ ಎಂದು ಅವರ ಆಪ್ತರು ಹೇಳಿದ್ದಾರೆ.
ಟಿಕೆಟ್ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ವಿರುದ್ಧ ಮುನಿಸಿಕೊಂಡಿರುವ ಕೆ.ಎಸ್.ಈಶ್ವರಪ್ಪ ಅವರನ್ನು ಸಮಾಧಾನಪಡಿಸಲು ನಾಯಕರು ಪ್ರಯತ್ನಪಟ್ಟು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈಶ್ವರಪ್ಪ ಅವರನ್ನು ಸಮಾಧಾನಪಡಿಸುವ ಯತ್ನಕ್ಕಿಳಿದಿದ್ದರು. ಈಶ್ವರಪ್ಪ ಅವರಿಗೆ ಬುಧವಾರ ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದ ಅಮಿತ್ ಶಾ, ಬಳಿಕ ತಮ್ಮ ಭೇಟಿಗೆ ಅವಕಾಶ ನೀಡಲಿಲ್ಲ.
ದೆಹಲಿಗೆ ತೆರಳಿರುವ ಈಶ್ವರಪ್ಪ ಅವರು ಅಮಿತ್ ಷಾ ಅವರ ನಡೆಯಿಂದಾಗಿ ಮತ್ತಷ್ಟು ಕುಪಿತರಾಗಿದ್ದಾರೆ ಎನ್ನಲಾಗಿದೆ. ಬಿಜೆಪಿ ವರಿಷ್ಠರ ಈ ನಡೆಯ ಕಾರಣದಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರವನ್ನು ಈಶ್ವರಪ್ಪ ಖಚಿತಪಡಿಸಿದ್ದಾರೆ. ಈ ನಡುವೆ, ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಗೃಹ ಸಚಿವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರದಲ್ಲಿ ನಾನು ದೃಢವಾಗಿದ್ದೇನೆ ಎಂದು ಹೇಳಿದ್ದಾರೆ.