ಬೆಂಗಳೂರು : ಸರಣಿ ಅತ್ಯಾಚಾರ ಪ್ರಕರಣಗಳ ಅಪರಾಧಿ ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂ ಗೊಳಿಸಿ ಹೈಕೋರ್ಟ್ ತೀರ್ಪು ನೀಡಿದೆ. ಉಮೇಶ್ ರೆಡ್ಡಿ ಕ್ಷಮಾದಾನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಎರೋರ್ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಪೀಠ ತಿರಸ್ಕರಿಸಿದೆ.
ಚಿತ್ರದುರ್ಗ ಮೂಲದ ಉಮೇಶ್ ರೆಡ್ಡಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಸುಮಾರು 20 ಅತ್ಯಾಚಾರ ಕೊಲೆ ಪ್ರಕರಣಗಳ ಆರೋಪಿಯಾಗಿದ್ದ. ಪ್ರಕರಣವೊಂದರಲ್ಲಿ ಬೆಂಗಳೂರಿನ ಕೋರ್ಟ್ 2006ರಲ್ಲಿ ಗಲ್ಲು ಶಿಕ್ಷೆ ಪ್ರಕಟಿಸಿತ್ತು. ಈ ತೀರ್ಪನ್ನು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಎತ್ತಿಹಿಡಿದಿತ್ತು.
ತನಗೆ ಪ್ರಕಟಿಸಿರುವ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಬೇಕೆಂದು ಕೋರಿ ಉಮೇಶ್ ರೆಡ್ಡಿ ಹೈಕೋರ್ಟ್ ಮೊರೆ ಹೋಗಿದ್ದು, ಈ ಕೋರಿಕೆಯನ್ನು ಪುರಸ್ಕರಿಸಲು ನ್ಯಾಯಪೀಠ ನಿರಾಕರಿಸಿ, ಅರ್ಜಿಯನ್ನು ಇಂದು ವಜಾಗೊಳಿಸಿದೆ.