ಬೆಂಗಳೂರು: ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ವಿತರಿಸುವ ಟೂಲ್‌ಕಿಟ್ ಖರೀದಿ ಹಗರಣಕ್ಕೆ ಸಂಬಂಧಿಸಿ ರಾಜ್ಯದ ಜನರನ್ನು ವಂಚಿಸುತ್ತಿರುವ ಸಚಿವ ಅಶ್ವಥ್ ನಾರಾಯಣ್ ರವರನ್ನು ತಕ್ಷಣವೇ ವಜಾಗೊಳಿಸಬೇಕೆಂದು ಮುಖ್ಯಮಂತ್ರಿಗಳಿಗೆ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೃಥ್ವಿ ರೆಡ್ಡಿ, “ನಾವು ಮಾಡಿರುವ ಆರೋಪಕ್ಕೆ ಉತ್ತರ ನೀಡಿರುವ ಸಚಿವ ಅಶ್ವಥ್ ನಾರಾಯಣ್‌ರವರು 5.27 ಕೋಟಿ ರೂ. ಉಳಿಸಿದ್ದೇವೆ ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ನಿಜಾಂಶ ಏನೆಂದರೆ, ಏಕೈಕ ಬಿಡ್ಡರ್ ಇದ್ದಿದ್ದರಿಂದ ಮರು ಟೆಂಡರ್ ಮಾಡಿ, ಮೊದಲನೇ ಬಾರಿಯ ಪ್ರಕ್ರಿಯೆಯಲ್ಲಿ ಸೋತ ಕಂಪನಿಗೇ ಟೆಂಡರ್ ನೀಡಲಾಗಿದೆ. ಇದು ಕಮಿಷನ್ ಪಡೆಯಲು ಮಾಡಿದ ಕೆಲಸವೇ ಹೊರತು ಹಣ ಉಳಿಸಲು ಅಲ್ಲ. ಟೆಂಡರ್ ಗಿಟ್ಟಿಸಿಕೊಳ್ಳಲು ನಕಲಿ ಕಾಗದ ಪತ್ರಗಳ ಬಗ್ಗೆ ತುಟಿ ಬಿಚ್ಚದ ಸಚಿವರು, ಹಣ ಉಳಿಸಿದ್ದೇನೆ ಎಂದಷ್ಟೇ ಹೇಳುತ್ತಿದ್ದಾರೆ” ಎಂದು ಮಾಹಿತಿ ನೀಡಿದರು.
“ನಿಯಮಾವಳಿ ಪ್ರಕಾರ ಬೇಡಿಕೆಯ 30% ಸಾಮಾಗ್ರಿಗಳನ್ನು ಪೂರೈಸುವ ಶಕ್ತಿ ಹೊಂದಿರುವ ಬಗ್ಗೆ ದಾಖಲೆ ಸಲ್ಲಿಸಬೇಕು. ಆದರೆ, ನಕಲಿ ದಾಖಲೆ ಸೃಷ್ಟಿಸಿರುವುದು GST PORTALನಲ್ಲೇ ಬಟಾ ಬಯಲಾಗಿದೆ. ಸಚಿವರು, ಕಾರ್ಯದರ್ಶಿಗಳು ಇದನ್ನು ಏಕೆ ಪ್ರಶ್ನಿಸಲಿಲ್ಲ ಎಂಬುದೇ ಯಕ್ಷಪ್ರಶ್ನೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.
“ಇನ್ನೊಂದು ಆಶ್ಚರ್ಯಕರ ಸಂಗತಿಯೆಂದರೆ, ಇದೇ ಕಂಪನಿ ಕೆಲ ತಿಂಗಳ ಹಿಂದೆ ಲ್ಯಾಪ್‌ಟಾಪ್ ಹಗರಣದಲ್ಲಿ ಭಾಗಿಯಾಗಿತ್ತು. ಹಿಂದೆ ರೂ 14,000 ಸಿಗುತ್ತಿದ್ದ ಲ್ಯಾಪ್‌ಟಾಪ್ ಅನ್ನು ರೂ 24000ಕ್ಕೆ ಕೊಂಡ ಸರ್ಕಾರ ಬೊಕ್ಕಸಕ್ಕೆ ನೂರಾರು ಕೋಟಿ ನಷ್ಟ ಉಂಟು ಮಾಡಿದೆ” ಎಂಬ ಮಾಹಿತಿಯನ್ನು ಸಹ ಪೃಥ್ವಿ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು .
“ಉಭಯ ಸದನಗಳಲ್ಲಿ ಈ ವಿಚಾರದ ಬಗ್ಗೆ ಚರ್ಚೆಯಾದರೂ ಯಾವುದೇ ನಿರ್ಣಯಕ್ಕೆ ಬಂದಿಲ್ಲ. ಅಶ್ವಥ್ ನಾರಾಯಣ್ ರನ್ನು ಸಚಿವ ಸ್ಥಾನದಿಂದ ಕೂಡಲೇ ವಜಾಗೊಳಿಸಿ ಸಿ.ಬಿ.ಐ ಅಥವಾ ನ್ಯಾಯಾಂಗ ತನಿಖೆ ಮಾಡಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸುತ್ತದೆ. ಸರ್ಕಾರ ಒಂದು ವಾರದೊಳಗೆ ತೀರ್ಮಾನಿದೇ ಹೋದರೆ, ಈ ಹಗರಣದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿ ಜನಪರ ಹೋರಾಟ ಮಾಡಲಾಗುವುದು ಎಂದು ತಿಳಿಸಿದೆ” ಎಂದು ಪೃಥ್ವಿ ರೆಡ್ಡಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮೋಹನ್ ದಾಸರಿ, ಬಿ.ಟಿ ನಾಗಣ್ಣ, ಜಗದೀಶ್ ವಿ ಸದಂ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು.
ಧನ್ಯವಾದಗಳೊಂದಿಗೆ,
ಜಗದೀಶ್ ವಿ. ಸದಂ
ರಾಜ್ಯ ಮಾಧ್ಯಮ ಸಂಚಾಲಕರು, ಎಎಪಿ
ಸಂಪರ್ಕ: 9380029038
























































