ಬೆಂಗಳೂರು: ತಮಿಳುನಾಡಿನ ಚುನಾವಣಾ ಪ್ರಚಾರ ಸಭೆಗಳನ್ನು ಗಮನಿಸಿದಾಗ ಬಿಜೆಪಿ ಮತ್ತು ಎನ್‍ಡಿಎ ಅಂಗ ಪಕ್ಷಗಳು ಅತ್ಯುತ್ತಮ ಫಲಿತಾಂಶ ಪಡೆಯುವ ಸಾಧ್ಯತೆ ಗೋಚರಿಸುತ್ತಿದೆ ಎಂದು ತಮಿಳುನಾಡು ರಾಜ್ಯ ಬಿಜೆಪಿ ಉಸ್ತುವಾರಿಯೂ ಆದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೂತ್ ಗೆದ್ದು ಕೊಡಿ, ಅಭ್ಯರ್ಥಿ ಗೆಲ್ಲಿಸಿ’ ಎಂಬ ಘೋಷಣೆಯೊಂದಿಗೆ ಕಾರ್ಯಕರ್ತರನ್ನು ಬಿಜೆಪಿ ತೊಡಗಿಸಿಕೊಂಡಿತ್ತು. ತಮಿಳು ಅಸ್ಮಿತೆ ಮತ್ತು ಅಭಿವೃದ್ಧಿ ಕಾರ್ಯಸೂಚಿಯನ್ನು ಮತದಾರರ ಮುಂದಿಟ್ಟಿದ್ದು ಅದು ಉತ್ತಮ ಫಲಿತಾಂಶ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷದ ವಂಶ ಪಾರಂಪರ್ಯದ ರಾಜಕಾರಣ ಹಾಗೂ ಭ್ರಷ್ಟಾಚಾರವನ್ನು ಜನರ ಮುಂದಿಡಲಾಗಿದೆ. ಪ್ರಧಾನಿ ಅವರು ತಮಿಳುನಾಡಿನ ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ಜನರಿಗೆ ತಿಳಿಸಲಾಗಿವೆ ಎಂದು ವಿವರಿಸಿದ ರವಿ, ತಮಿಳುನಾಡಿನಲ್ಲಿ ಹಿಂದೆಯೂ ಎಐಎಡಿಎಂಕೆ, ಎನ್.ಡಿ.ಎ ಅಂಗ ಪಕ್ಷವಾಗಿತ್ತು. ತಮಿಳುನಾಡಿನಲ್ಲಿ ಬಿಜೆಪಿ ಗೆಲುವಿಗಾಗಿ ವಿಶೇಷ ಶ್ರಮ ವಹಿಸಿದೆ ಆದ್ದರಿಂದ ತಮಿಳುನಾಡು ಕಬ್ಬಿಣದ ಕಡಲೆಯಲ್ಲ ಎಂಬುದು ಫಲಿತಾಂಶದ ಮೂಲಕ ಗೊತ್ತಾಗಲಿದೆ. ಶಶಿಕಲಾ ಅವರು ಎಐಎಡಿಎಂಕೆ ಪರವಾಗಿದ್ದಾರೆ ಎಂದು ತಿಳಿಸಿದರು.
ತಮಿಳುನಾಡಿನಲ್ಲಿ ಬಿಜೆಪಿ ಪ್ರಮುಖ ಪಕ್ಷವಲ್ಲ, ಎನ್‍ಡಿಎಯ ಒಂದು ಭಾಗವಾಗಿ ಬಿಜೆಪಿ ಸ್ಪರ್ಧಿಸಿದೆ, ಎಐಎಡಿಎಂಕೆ ಜೊತೆಗೆ ಬಿಜೆಪಿ, ಪಿಎಂಕೆ, ತಮಿಳ್ ಮಹಿಳಾ ಕಾಂಗ್ರೆಸ್ ಮತ್ತಿತರ ಪಕ್ಷಗಳು ಸ್ಪರ್ಧಿಸಿವೆ. ಎದುರಾಳಿ ಪಕ್ಷವಾಗಿ ಡಿಎಂಕೆ, ಕಾಂಗ್ರೆಸ್ ಮತ್ತಿತರ ಪಕ್ಷಗಳಿವೆ. ಮೇಲ್ನೋಟಕ್ಕೆ ಎಐಎಡಿಎಂಕೆ ಮತ್ತು ಡಿಎಂಕೆ ನಡುವೆ ಸ್ಪರ್ಧೆ ಇದೆ. ಇಡೀ ಚುನಾವಣೆಯ ಕಾರ್ಯಸೂಚಿಯನ್ನು ಬಿಜೆಪಿ ಹೆಣೆದಿದೆ ಎಂದರು.
ಚುನಾವಣಾ ಪೂರ್ವದಲ್ಲಿ ನವೆಂಬರ್‍ನಲ್ಲಿ ನಾವು ವೆಟ್ರಿವೇಲ್ ಯಾತ್ರೆಯನ್ನು ಕೈಗೊಂಡೆವು. ತಮಿಳುನಾಡಿನ ಆರಾಧ್ಯ ದೈವ ಲಾರ್ಡ್ ಮುರುಗನ್ ಅವರನ್ನು ಅವಹೇಳನ ಮಾಡುವ ಡಿಎಂಕೆ ಅಂಗ ಪಕ್ಷಗಳ ಕ್ರಮದ ವಿರುದ್ದ ಈ ಯಾತ್ರೆ ಹಮ್ಮಿಕೊಳ್ಳಲಾಯಿತು. ಈ ಯಾತ್ರೆಗೆ ಅಭೂತಪೂರ್ವ ಬೆಂಬಲವೂ ಲಭಿಸಿತು. ಈ ಯಾತ್ರೆ ಪರಿಣಾಮವಾಗಿ ನಾವು ಹಿಂದೂ ವಿರೋಧಿಯಲ್ಲ ಎಂದು ತೋರಿಸಿಕೊಳ್ಳಲು ಡಿಎಂಕೆ ಮುಂದಾಯಿತು ಎಂದು ಸಿ.ಟಿ.ರವಿ ತಿಳಿಸಿದರು.
ಜಲ್ಲಿಕಟ್ಟು ಚುನಾವಣೆಯ ಪ್ರಮುಖ ವಿಷಯವಾಯಿತು. ಸಂಸ್ಕøತಿಯ ಉಳಿವಿನ ದೃಷ್ಟಿಯಿಂದ ಜಲ್ಲಿಕಟ್ಟು ಮೇಲೆ ಹೇರಿದ್ದ ನಿಷೇಧವನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರದ ಪ್ರಯತ್ನದಿಂದ ತೆರವುಗೊಳಿಸಲಾಗಿತ್ತು. ಜಲ್ಲಿಕಟ್ಟು ಕ್ರೀಡೆಯನ್ನು ಕಾಂಗ್ರೆಸ್‍ನವರು ಬೆಂಬಲಿಸುವುದು ಅನಿವಾರ್ಯವಾಯಿತು ಎಂದು ತಿಳಿಸಿದರು.
ಕರ್ನಾಟಕ ಮತ್ತು ತೆಲಂಗಾಣದಿಂದ ಪಕ್ಷದ ಪ್ರಮುಖರು ಚುನಾವಣಾ ಉಸ್ತುವಾರಿಗಳಾಗಿ ಪಾಲ್ಗೊಂಡಿದ್ದರು. ಸಂಘಟನಾ ಉಸ್ತುವಾರಿಗಳಾಗಿ ನಾನು ಮತ್ತು ತೆಲಂಗಾಣದ ವಿಧಾನಪರಿಷತ್ ಮಾಜಿ ಸದಸ್ಯ ಸುಧಾಕರ್ ರೆಡ್ಡಿ ಕಾರ್ಯನಿರ್ವಹಿಸಿದರು. ಕರ್ನಾಟಕದ ಸಚಿವರಾದ ಬೈರತಿ ಬಸವರಾಜ್, ಎಸ್.ಟಿ. ಸೋಮಶೇಖರ್, ಸಂಸದರಾದ ಪಿ.ಸಿ. ಮೋಹನ್, ಮುನಿಸ್ವಾಮಿ, ಶಾಸಕರಾದ ಸತೀಶ್ ರೆಡ್ಡಿ, ಮುನಿರತ್ನ, ರವಿ ಸುಬ್ರಹ್ಮಣ್ಯ ಹಾಗೂ ಮುಖಂಡರು,
ಕರ್ನಾಟಕದಿಂದ ಸಂಸದರಾದ ಆನೆಕಲ್ ನಾರಾಯಣಸ್ವಾಮಿ, ಸಚಿವರಾದ ಆರ್ ಅಶೋಕ್, ವಿ ಸೋಮಣ್ಣ, ಶಾಸಕರಾದ ರಾಜು ಗೌಡ ಅವರೂ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಪ್ರಧಾನ ಮಂತ್ರಿಗಳು ಚುನಾವಣಾ ಪೂರ್ವದಲ್ಲಿ ಎರಡು ಸಭೆಗಳಿಗೆ ಬಂದು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದರು. ವಾಂಗೋ ಮೋದಿ, ವಣಕ್ಕಂ ಮೋದಿ ಕಾರ್ಯಕ್ರಮದ ಮೂಲಕ ಪ್ರಧಾನಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿತ್ತು. ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಿ ಅವರು ಮಾತ್ರವಲ್ಲದೆ ಕೇಂದ್ರ ಗೃಹ ಸಚಿವರು, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರು ಹಲವು ಸಭೆಗಳಲ್ಲಿ ಭಾಗವಹಿಸಿದ್ದರು ಎಂದರು.