ಬೆಂಗಳೂರು: ರಾಜ್ಯಕ್ಕೆ ಕೇಂದ್ರ ಸರ್ಕಾರವು 15 ಲಕ್ಷಕ್ಕೂ ಹೆಚ್ಚು ಕೋವಿಡ್ ಲಸಿಕೆ ಡೋಸ್ ನೀಡಿದ್ದು, ಮತ್ತಷ್ಟು ಜನರು ಲಸಿಕೆ ಪಡೆಯಬಹುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ರಾಜ್ಯದಲ್ಲಿ ಭಾನುವಾರದವರೆಗೆ 46,02,000 ಮಂದಿಗೆ ಲಸಿಕೆ ನೀಡಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದೊಂದಿಗೆ ಮಾತುಕತೆ ನಡೆಸಿದ ಬಳಿಕ 15 ಲಕ್ಷಕ್ಕೂ ಹೆಚ್ಚು ಲಸಿಕೆ ದೊರೆತಿದೆ. 10 ಲಕ್ಷ ಡೋಸ್ ಬೆಂಗಳೂರಿಗೆ ಹಾಗೂ 5 ಲಕ್ಷ ಡೋಸ್ ಬೆಳಗಾವಿಗೆ ಕಳುಹಿಸಲಾಗಿದೆ ಎಂದವರು ತಿಳಿಸಿದ್ದಾರೆ.
ರಜೆ ಇದ್ದಿದ್ದರಿಂದ ಸೋಂಕಿತರ ಸಂಖ್ಯೆ ಇಳಿಕೆಯಾಗಿದೆ. ಕೋವಿಡ್ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವುದರಿಂದ ಇನ್ನಷ್ಟು ಇಳಿಕೆ ಮಾಡಬಹುದು. ಎಂಟು ರಾಜ್ಯಗಳೊಂದಿಗೆ ಪ್ರಧಾನಿಯವರು ಸಭೆ ನಡೆಸಿ, ಕಠಿಣ ನಿರ್ಧಾರ ಕೈಗೊಳ್ಳುವಂತೆ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಕಠಿಣ ನಿರ್ಧಾರ ವಹಿಸಲಾಗಿದೆ. ನಮ್ಮ ರಾಜ್ಯದಲ್ಲಿ ಆ ಬಗೆಯ ಪರಿಸ್ಥಿತಿ ಬರುವುದು ಬೇಡ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುವುದಿಲ್ಲ ಎಂದು ಭಾವಿಸುವುದು ಬೇಡ ಎಂದರು.
ಸೋಂಕಿತರ ಸಂಖ್ಯೆ ಹೆಚ್ಚಾದರೆ ಹಾಸಿಗೆ ಕೊರತೆಯಾಗುತ್ತದೆ. ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳ ಬಳಿ ಮಾಹಿತಿ ಪಡೆದಿದ್ದೇನೆ. ಈ ಬಗ್ಗೆ ಇನ್ನಷ್ಟು ಚರ್ಚೆ ಮಾಡುತ್ತೇನೆ. ಇನ್ನೂ ಮೇ ಅಂತ್ಯದವರೆಗೆ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ತಾಂತ್ರಿಕ ಸಲಹಾ ಸಮಿತಿಯವರು ಹೇಳಿದ್ದಾರೆ. ಎರಡನೇ ಅಲೆಯನ್ನು ನಿಯಂತ್ರಿಸಿ ಜೀವ ಉಳಿಸುವ ಕೆಲಸ ಮಾಡಬೇಕು. ಇದಕ್ಕೆ ಎಲ್ಲ ಸಹಕಾರ ಬೇಕು ಎಂದು ಸುಧಾಕರ್ ಮನವಿ ಮಾಡಿದರು.
ಬೆಂಗಳೂರಿನಲ್ಲಿ ದಿನಕ್ಕೆ ಆರೂವರೆ ಸಾವಿರ ಸೋಂಕಿತರು ಕಂಡುಬರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಸೋಂಕು ನಿಯಂತ್ರಣ ಮಾಡದಿದ್ದರೆ ಅಂತಹ ಪರಿಸ್ಥಿತಿ ಬರಬಹುದು. ವಿರೋಧ ಪಕ್ಷಗಳ ಸಲಹೆಗಳನ್ನು ಕೂಡ ನಾವು ಪಡೆಯುತ್ತೇವೆ. ಸಮಯ ಬಂದಾಗ ಪ್ರತಿಪಕ್ಷದವರನ್ನು ಕೂಡ ಕರೆದು ಚರ್ಚಿಸೋಣ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ವಿಕ್ಟೋರಿಯಾ, ಬೌರಿಂಗ್ ಆಸ್ಪತ್ರೆಗಳಲ್ಲಿ ಕೋವಿಡ್ ಗೆ ಹೆಚ್ಚು ಹಾಸಿಗೆ ಮೀಸಲಿಡುವ ಅಗತ್ಯವಿದೆ. ಇದರ ಕಡೆ ಹೆಚ್ಚು ಲಕ್ಷ್ಯ ನೀಡಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲಿ ಶೇ.20 ರಷ್ಟು ಹಾಸಿಗೆ ಮೀಸಲಿಡಬೇಕೆಂದು ಹೇಳಲಾಗಿದೆ. ಈ ಪ್ರಮಾಣವನ್ನೂ ಹೆಚ್ಚಿಸಬೇಕಿದೆ ಎಂದರು.