ಸುಳ್ಯ: ಮಡಪ್ಪಾಡಿ ಗ್ರಾಮವನ್ನು ಸಂಪರ್ಕಿಸುವ ಸೇವಾಜೆ- ಮಡಪ್ಪಾಡಿ ರಸ್ತೆ ಅಭಿವೃದ್ಧಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಯತ್ನ ಮತ್ತು ಗ್ರಾಮ ವಾಸ್ತವ್ಯದ ಫಲವಾಗಿ ಸರಕಾರ ಒಂದೂವರೆ ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಜ.11ರಂದು ಶಂಕುಸ್ಥಾಪನೆ ನೆರವೇರಿದ್ದು ಎರಡು ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ತಿ ಮಾಡುವ ಭರವಸೆಯನ್ನು ಇಂಜಿನಿಯರ್‌ಗಳು ನೀಡಿದ್ದಾರೆ.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು 2020 ಜನವರಿ 5 ರಂದು ಮಡಪ್ಪಾಡಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಮಡಪ್ಪಾಡಿ ಗ್ರಾಮದ ಸಂಪರ್ಕ ರಸ್ತೆ ಅಭಿವೃದ್ಧಿ ಮಾಡಬೇಕು ಎಂಬುದು ಜನರಿಂದ ಕೇಳಿ ಬಂದ ಪ್ರಮುಖ ಬೇಡಿಕೆಯಾಗಿತ್ತು. ಬಳಿಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ನೇತೃತ್ವದ ಪತ್ರಕರ್ತರ ನಿಯೋಗ ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರನ್ನು ಭೇಟಿ ಮಾಡಿ ಮಡಪ್ಪಾಡಿಯ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಕೂಡಲೇ ಸ್ಪಂದಿಸಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು 2 ಕೋಟಿ ಅನುದಾನ ಘೋಷಣೆ ಮಾಡಿದ್ದರು. ಅದರಲ್ಲಿ 1.5 ಕೋಟಿ ಅನುದಾನ ಬಿಡುಗಡೆಯಾಗಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಎಲಿಮಲೆಯಿಂದ ಮಡಪ್ಪಾಡಿಗೆ 9 ಕಿ.ಮಿ.ದೂರವಿದೆ. ಎಲೆಮಲೆ- ಅರಂತೋಡು ಲೋಕೋಯೋಗಿ ರಸ್ತೆಯ ಸೇವಾಜೆಯಿಂದ ಮಡಪ್ಪಾಡಿಗೆ 5 ಕಿ.ಮಿ.ದೂರ ಇದೆ. ಇದರಲ್ಲಿ 1.5 ಕಿ.ಮಿ. ರಸ್ತೆ ಅಭಿವೃದ್ಧಿಯಾಗಿದೆ. ಉಳಿದ 3.7 ಕಿ.ಮಿ. ರಸ್ತೆ ಸಂಪೂರ್ಣ ಎಕ್ಕುಟ್ಟಿ ಹೋಗಿದೆ. ಇದೀಗ ಗ್ರಾಮೀಣಾಭಿವೃದ್ಧಿ ಇಲಾಖೆ ನೀಡಿದ ಈ ಅನುದಾನದಲ್ಲಿ ರಸ್ತೆಯ 3.7 ಕಿ.ಮಿ. ಅಭಿವೃದ್ಧಿಯಾಗಲಿದೆ. 3.75 ಮೀಟರ್ ಅಗಲದಲ್ಲಿ ರಸ್ತೆugh ಅಭಿವೃದ್ಧಿ ಕಾಣಲಿದ್ದು ಇದರಲ್ಲಿ 150 ಮೀಟರ್ ಕಾಂಕ್ರೀಟೀಕರಣ ಮತ್ತು ಉಳಿದ ಭಾಗ ಡಾಮರೀಕರಣ ನಡೆಯಲಿದೆ ಎಂದು ಇಂಜಿನಿಯರ್‌ಗಳು ತಿಳಿಸಿದ್ದಾರೆ.