ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಯುವಕರಿಗೆ ಉದ್ಯೋಗ ನೀಡುವಲ್ಲಿ ಸಂಪೂರ್ಣ ವೈಫಲ್ಯ ಕಂಡಿರುವ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ರಾಜ್ಯದ ಮತ್ತು ದೇಶದ ಯುವಕರ ಬದುಕನ್ನು ಕಸಿದುಕೊಂಡಿರುತ್ತದೆ. ಕೋಟ್ಯಾಂತರ ಯುವಕರ ಬದುಕು ಬೀದಿಪಾಲಾಗಿದ್ದು, ಹತಾಶೆಯ ಹಂತಕ್ಕೆ ತಲುಪಿರುತ್ತಾರೆ. ಕಲಬುರ್ಗಿಯ ಸಿದ್ದುಪ್ರಸಾದ ಬಿರಾಳ ಪದವೀಧರ ಯುವಕ ಉದ್ಯೋಗ ದೊರಕದೆ ಹತಾಶನಾಗಿ ಆತ್ಮಹತ್ಯೆಗೆ ಶರಣಾಗಿರುತ್ತಾನೆ. ಅವರ ಕುಟುಂಬಕ್ಕೆ ಸಾಂತ್ವನ ಹೇಳದ ರಾಜ್ಯದ ಪೇಸಿಎಮ್ ಮುಖ್ಯಮಂತ್ರಿ ಮತ್ತು ೪೦% ಸರ್ಕಾರದ ಬಿಜೆಪಿ ಮುಖಂಡರು ಚುನಾವಣಾ ಪ್ರಚಾರದಲ್ಲಿ ಸುಳ್ಳುಗಳ ಸೌಧ ಕಟ್ಟಲು ಬಿಡುವಿಲ್ಲದೆ ಶ್ರಮಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಆರೋಪಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಸುಮಾರು ಎರಡುವರೆ ಲಕ್ಷ ಸರ್ಕಾರಿ ಉದ್ಯೋಗಗಳು ಖಾಲಿ ಇದ್ದರೂ ಅವುಗಳನ್ನು ತುಂಬುವ ಯಾವುದೇ ಪ್ರಾಮಾಣಿಕ ಪ್ರಯತ್ನವನ್ನು ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರ ಇಲ್ಲಿಯವರೆಗೆ ಮಾಡಿರುವುದಿಲ್ಲ. ಖಾಸಗಿ ವಲಯದಲ್ಲಿ ಸುಮಾರು 20 ಲಕ್ಷ ಉದ್ಯೋಗಗಳಿಗೆ ಅವಕಾಶವಿದ್ದರೂ, ಯುವಕರ ಕನಸುಗಳಿಗೆ ಪೂರಕವಾಗಿ ಕೆಲಸ ನೀಡುವ ಪ್ರಯತ್ನವನ್ನು ಮಾಡಿರುವುದಿಲ್ಲ. ಕರ್ನಾಟಕದಲ್ಲಿ ಸುಮಾರು 50 ಲಕ್ಷ ಪದವೀಧರ ಮತ್ತು ಡಿಪ್ಲೊಮೊ ವ್ಯಾಸಂಗದ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಉದ್ಯೋಗವಿಲ್ಲದೆ ಹತಾಶರಾಗಿ ಪದೇ ಪದೇ ಯುವಕರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದವರು ಕಳವಳ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು 1129 ಯುವಕರು ಉದ್ಯೋಗವಿಲ್ಲದೆ ಆತ್ಮಹತ್ಯೆಗೆ ಶರಣಾಗಿರುತ್ತಾರೆ. ಖಾಸಗಿ ಉದ್ಯೋಗ ವಲಯದಲ್ಲಿ ರಾಜ್ಯವು ಎಂಟನೇ ಸ್ಥಾನದಿಂದ ಹದಿನೇಳನೇ ಸ್ಥಾನಕ್ಕೆ ಕುಸಿದಿರುತ್ತದೆ. ಕೆಪಿಎಸ್‌ಸಿ ಮತ್ತು ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಹುದ್ದೆಗಳನ್ನು ತುಂಬುವ ಪ್ರಕ್ರಿಯೆ ಲಂಚದ ಹಗರಣಗಳಾಗಿ ಮಾರ್ಪಟ್ಟಿದ್ದು ಪಿಎಸ್‌ಐ ಹುದ್ದೆ, ಇಂಜಿನಿಯರ್ ಹುದ್ದೆ, ಕಾಲೇಜುಗಳಲ್ಲಿ ಅದ್ಯಾಪಕರ ಹುದ್ದೆ, ಕ್ಲಾಸ್-2 ಹುದ್ದೆ ಹಾಗೂ ಇತರೆ ಹುದ್ದೆಗಳು ಪ್ರತೀ ಹುದ್ದೆಗೆ ಕೋಟ್ಯಾಂತರ ರೂಪಾಯಿಗೆ ಬಿಕರಿಯಾಗಿದೆ. ಲಂಚವಿಲ್ಲದೆ ಹುದ್ದೆಯಿಲ್ಲವೆಂಬ ಸಂದೇಶ ಬಿಜೆಪಿ ಸರ್ಕಾರದಲ್ಲಿ ಮನೆ ಮೆನೆ ಮಾತಾಗಿದೆ ಎಂದವರು ಹೇಳಿದರು.
ಲೋಕಸಭಾ ಚುನಾವಣಾ ಸಮಯದಲ್ಲಿ ಎರಡು ಕೋಟಿ ಉದ್ಯೋಗ ಸೃಷ್ಟಿಯ ಆಶ್ವಾಸನೆ ನೀಡಿದ್ದ ಮೋದಿ ನಾಯಕತ್ವದ ಬಿಜೆಪಿ ಸರ್ಕಾರ ಇಲ್ಲಿಯವರೆಗೆ ಯುವಜನರಿಗೆ ಕೆಲಸ ನೀಡುವಲ್ಲಿ ವಿಫಲವಾಗಿದ್ದು, ಉದ್ಯೋಗ ಕೇಳಿದ ಯುವಕರನ್ನು ಪಕೋಡ ಮಾರಿ ಜೀವನ ಮಾಡುವಂತೆ ಉದ್ದಟತನದ ಹೇಳಿಕೆ ನೀಡಿರುತ್ತದೆ. ಕಳೆದ 9 ವರ್ಷಗಳಲ್ಲಿ ಕೇಂದ್ರದಲ್ಲಿ ಸುಮಾರು 13 ಕೋಟಿ ಉದ್ಯೋಗ ಕಳೆದುಹೋಗಿದ್ದು, ಯುವಜನರು ಬದುಕು ಕಟ್ಟಿಕೊಳ್ಳಲು ಪರಿತಪಿಸುತ್ತಿದ್ದಾರೆ. ದೇಶದ ವಿದ್ಯಾವಂತರಲ್ಲಿ ಶೇಕಡ 20ರಷ್ಟು ಯುವಕರು ಉದ್ಯೋಗವಿಲ್ಲದೆ ಅತಂತ್ರರಾಗಿದ್ದಾರೆ. ಕೇಂದ್ರ ಸರ್ಕಾರದ ಸುಮಾರು 15 ಲಕ್ಷ ಸರ್ಕಾರಿ ಉದ್ಯೋಗ ಭರ್ತಿ ಆಗಿಲ್ಲ ಎಂದ ರಮೇಶ್ ಬಾಬು, ಕರ್ನಾಟಕ ರಾಜ್ಯ ಸರ್ಕಾರದ ಬಿಜೆಪಿ ಸರ್ಕಾರ ನಡೆಸಿರುವ ಉದ್ಯೋಗ ಮೇಳಗಳು ಸರ್ಕಾರದ ಸಚಿವರು, ಕೈಗಾರಿಕಾ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಹಾಲು ಕರೆಯುವ ಹಸುಗಳಾಗಿ ಮಾರ್ಪಟ್ಟಿದ್ದು, ಮೇಳಗಳ ಹೆಸರಿನಲ್ಲಿ ಖಾಸಗಿ ಕಂಪನಿಗಳಿಗೆ ರಾಜ್ಯದ ಭೂಮಿಗಳನ್ನು ಹಂಚಿಕೆ ಮಾಡಿ ದಂದೆ ಮಾಡಿರುತ್ತಾರೆ. ಕರ್ನಾಟಕದ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕ ಮತ್ತು ಉಪನ್ಯಾಸಕರ ಹುದ್ದೆಯನ್ನು ತುಂಬುವ ಯಾವುದೇ ಪ್ರಯತ್ನವನ್ನು ಕಳೆದ ಮೂರುವರೆ ವರ್ಷದಲ್ಲಿ ಬಿಜೆಪಿ ಸರ್ಕಾರ ಮಾಡಿರುವುದಿಲ್ಲ. ಕನಿಷ್ಠ ಚುನಾವಣಾ ಪೂರ್ವದಲ್ಲಿ ಅವರ ವರ್ಗಾವಣೆಗಳಿಗೂ ಅವಕಾಶ ನೀಡಿರುವುದಿಲ್ಲ ಎಂದು ಗಮನಸೆಳೆದರು.
ಕರ್ನಾಟಕದಲ್ಲಿ ಸುಮಾರು 1.29 ಲಕ್ಷ ಆಕಾಂಕ್ಷಿಗಳು ಪಿಎಸ್‌ಐ ನೇಮಕಾತಿಗೆ ಮತ್ತು ಸುಮಾರು 60 ಸಾವಿರ ಆಕಾಂಕ್ಷಿಗಳು ಇಂಜಿನಿಯರಿAಗ್ ಹುದ್ದೆಗೆ ಪರೀಕ್ಷೆ ಬರೆದಿದ್ದು, ಲಂಚದ ಕಾರಣಕ್ಕಾಗಿ ಈ ನೇಮಕಾತಿಗಳು ಹಗರಣಗಳಾಗಿ ಮಾರ್ಪಟ್ಟವು. ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸುವ ಕಾಂಗ್ರೆಸ್ ಪಕ್ಷದ ನರೇಗಾ ಕಾರ್ಯಕ್ರಮವನ್ನು ಹಣ ಮಾಡುವ ದಂದೆಯಾಗಿ ಬಿಜೆಪಿ ಸರ್ಕಾರ ಮಾರ್ಪಡಿಸಿದೆ. ಗುಲ್ಬರ್ಗಾದ ಜೇವರ್ಗಿ ನಗರದಲ್ಲಿ ಆತ್ಮಹತ್ಯೆಗೆ ಶರಣಾದ ಪದವೀಧರ ಸಿದ್ದು ಪ್ರಸಾದ ಬಿರಾಳರವರ ಸಾವಿಗೆ ಬಿಜೆಪಿ ಸರ್ಕಾರವೇ ನೇರ ಕಾರಣವಾಗಿದ್ದು, ಮುಖ್ಯಮಂತ್ರಿಗಳು ಮತ್ತು ಬಿಜೆಪಿ ಪಕ್ಷ ರಾಜ್ಯದ ಕ್ಷಮೆ ಕೇಳಬೇಕು ಎಂದು ರಮೇಶ್ ಬಾಬು ಆಗ್ರಹಿಸಿದರು.