ಬೆಂಗಳೂರು: ಸವದತ್ತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ವಿಚಾರದಲ್ಲಿ ಚುನಾವಣಾ ಆಯೋಗದ ನಡೆ ಬಗ್ಗೆ ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿದೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡಿರುವ ರಾಜಕೀಯ ವಿಶ್ಲೇಷಕರೂ ಆಗಿರುವ ಮಾಜಿ ಶಾಸಕ, ಕೆಪಿಸಿಸಿ ವಕ್ತಾರ ರಮೇಶ್ ಬಾಬು, ರಾಜ್ಯದ ಚುನಾವಣಾ ಆಯೋಗವು ಬಿಜೆಪಿ ಪರವಾದ ನಿಲುವನ್ನು ಕೈಬಿಡಬೇಕೆಂದು ಒತ್ತಾಯಿಸಿದರು.
ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀಮತಿ ರತ್ನ ಆನಂದ್ @ ವಿಶ್ವನಾಥ ಮಾಮನಿಯವರ ನಾಮಪತ್ರವನ್ನು ತಾಂತ್ರಿಕ ಕಾರಣಕ್ಕಾಗಿ ತಿರಸ್ಕರಿಸದೆ ಇರುವುದು ಹಲವಾರು ಅನುಮಾನಗಳಿಗೆ ಅವಕಾಶಗಳನ್ನು ಕೊಟ್ಟಿದೆ. ಚುನಾವಣಾ ಆಯೋಗವು ಯಾವುದೇ ಅಭ್ಯರ್ಥಿ ತಮ್ಮ ನಾಮ ಪತ್ರಗಳನ್ನು ಸಲ್ಲಿಸಲು 20-04-2023ರ ಮದ್ಯಾಹ್ನ 3 ಗಂಟೆಯವರೆಗೆ ಅವಕಾಶವಿತ್ತು. ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ 18-04-2023ರಂದು ತಮ್ಮ ನಾಮ ಪತ್ರ ಸಲ್ಲಿಸಿರುತ್ತಾರೆ. ಇವರ ಚುನಾವಣಾ ಪ್ರಮಾಣ ಪತ್ರವನ್ನು ಚುನಾವಣಾ ಆಯೋಗ 19.04.2023ರಂದು ಅಪ್‌ಲೋಡ್ ಮಾಡಿರುತ್ತದೆ ಎಂದು ರಮೇಶ್ ಬಾಬು ಗಮನಸೆಳೆದರು.

ಬಿಜೆಪಿ ಅಭ್ಯರ್ಥಿಯು 20.04.2023ರಂದು ಸಂಜೆ 07.38ರಲ್ಲಿ ತಮ್ಮ ಚುನಾವಣಾ ಪ್ರಮಾಣ ಪತ್ರಕ್ಕೆ ನಿಗದಿತ ಚಾಪಾ ಕಾಗದವನ್ನು ವಿಕಾಸ್ ಸಹಕಾರಿ ಸಂಸ್ಥೆಯಿಂದ ಖರೀದಿ ಮಾಡಿದ್ದು, ನೋಟರಿ ಮುಂದೆ ಪ್ರಮಾಣೀಕರಿಸಿ ನಂತರ ಚುನಾವಣಾ ಆಯೋಗಕ್ಕೆ ದಾಖಲು ಮಾಡಿರುತ್ತಾರೆ. ಯಾವುದೇ ಸಹಕಾರಿ ಸಂಘದ ವಹಿವಾಟು ಸಂಜೆ 5 ಗಂಟೆಗೆ ಆಖೈರುಗೊಳ್ಳುತ್ತದೆ. ಇವರ ಪ್ರಮಾಣ ಪತ್ರದ ಸ್ಟಾಂಪ್ ಪೇಪರ್ ಖರೀದಿ ಹಲವಾರು ಅನುಮಾನಗಳಿಗೆ ಅವಕಾಶ ನೀಡುತ್ತಿದೆ. ಅದೇ ದಿನ ಇವರು ನಿಗದಿತ ಸಮಯದ ನಂತರ ಪ್ರಮಾಣ ಪತ್ರ ಚುನಾವಣಾ ಆಯೋಗಕ್ಕೆ ನೀಡಿದ್ದರೆ, ಅದು ಮರುದಿನ ಚುನಾವಣಾ ಆಯೋಗದಲ್ಲಿ ದಾಖಲಾಗಬೇಕು ಮತ್ತು ವೆಬ್‌ಸೈಟ್ ನಲ್ಲಿ ಅಪ್‌ಲೋಡ್ ಆಗಬೇಕು. ಆದರೆ ಆಯೋಗವು ಈ ಪ್ರಮಾಣ ಪತ್ರ 19.04.2023ರಂದು ಅಪ್‌ಲೋಡ್ ಆಗಿದೆ ಎಂದು ತಿಳಿಸುತ್ತಿದೆ. ಅಂದರೆ 20.04.2023ರ ಪ್ರಮಾಣ ಪತ್ರ 19.04.2022ರಂದೇ ಅಪ್‌ಲೋಡ್ ಆಗಲು ಹೇಗೆ ಸಾಧ್ಯ? ಚುನಾವಣಾ ಆಯೋಗವು ಬಿಜೆಪಿಯ ಪರವಾಗಿ ರಾಜ್ಯದಲ್ಲಿ ನಡೆದುಕೊಳ್ಳುತ್ತಿರುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಯಾವುದು? ಎಂದುಬಲ ಪ್ರಶ್ನಿಸಿರುವ ರಮೇಶ್ ಬಾಬು, ಚುನಾವಣಾ ಆಯೋಗವು ಒಂದು ರಾಜಕೀಯ ಪಕ್ಷದ ಪರವಾಗಿ ವಾಲಿದರೆ ಕರ್ನಾಟಕದಲ್ಲಿ ಮುಕ್ತವಾದ ಚುನಾವಣೆ ನಡೆಸಲು ಸಾಧ್ಯವಿಲ್ಲ. ಕೇಂದ್ರ ಚುನಾವಣಾ ಆಯೋಗವು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಒತ್ತಡಕ್ಕೆ ಮಣಿದು ಇಂತಹ ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ತನ್ನ ಪಕ್ಷಪಾತದ ನಿಲುವನ್ನು ಒಪ್ಪಿಕೊಳ್ಳಲಿ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಕೇಂದ್ರ ಚುನಾವಣಾ ಆಯೋಗದ ಇಂತಹ ರಾಜಕೀಯ ಪ್ರೇರಿತ ಕ್ರಮಗಳನ್ನು ಖಂಡಿಸುತ್ತದೆ ಮತ್ತು ರಾಜ್ಯದಲ್ಲಿ ಮುಕ್ತವಾದ ಚುನಾವಣೆಗೆ ಒತ್ತಾಯಿಸುತ್ತದೆ ಎಂದರು.