ಬೆಂಗಳೂರು: ಕೆ ಎಸ್ ಆರ್ ಟಿ ಸಿ ಕೇಂದ್ರ ಕಚೇರಿಯಲ್ಲಿ, 33 ವರ್ಷಗಳ ಸುದೀರ್ಘ ಕಾಲ ಅಪಘಾತ ರಹಿತ ಚಾಲನಾ ಸೇವೆ ಸಲ್ಲಿಸಿ, ರಾಜ್ಯ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟ (ASRTU) ಪ್ರಧಾನ ಮಾಡುವ ‘ಹೀರೋಸ್ ಆನ್ ದ ರೋಡ್’ ಪ್ರಶಸ್ತಿ ಪಡೆದ ಎಜಾಜ್ ಅಹಮ್ಮದ್ ಶರೀಫ್ (ಬಿಲ್ಲೆ ಸಂಖ್ಯೆ 1904 ಹುಣಸೂರು ಘಟಕ) ಹಾಗೂ ಇಶಾಕ್ ಶರೀಫ್ (ಬಿಲ್ಲೆ ಸಂಖ್ಯೆ 2197 ಸಾತಗಳ್ಳಿ ಘಟಕ) ಇವರನ್ನು ಅಭಿನಂದಿಸಲಾಯಿತು. ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರು ತಲಾ 5000 ರೂಪಾಯಿ ನಗದು ಪುರಸ್ಕಾರ ನೀಡಿ, ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕರು, ಈ ಚಾಲಕರು ಈಗಾಗಲೇ ನಿಗಮದಿಂದ ಬೆಳ್ಳಿ ಮತ್ತು ಚಿನ್ನದ ಪದಕ ಪಡೆದಿರುವುದನ್ನು ಸ್ಮರಿಸಿದರು. ಚಾಲನಾ ವೃತ್ತಿಯು ಅತ್ಯಂತ ಕಷ್ಟ ಮತ್ತು ಜವಾಬ್ದಾರಿಯಿಂದ ಕೂಡಿದ್ದು, ಅಪಘಾತಗಳನ್ನು ತಡೆಗಟ್ಟುವುದು ಸವಾಲೇ ಸರಿ. ತಮ್ಮದಲ್ಲದ ತಪ್ಪಿನಿಂದಲೂ ಹಲವು ಬಾರಿ ಅಪಘಾತ ಉಂಟಾಗುತ್ತದೆ. ಚಾಲಕರು ಹೆಚ್ಚು ಸಂಯಮ ಮತ್ತು ತಾಳ್ಮೆಯನ್ನು ಹೊಂದಿದ್ದರೆ ಮಾತ್ರ ಈ ರೀತಿಯ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿ, ಸದರಿ ಚಾಲಕರುಗಳ ಸೇವೆಯು ಅನನ್ಯ ಮತ್ತು ಅನುಕರಣೀಯ ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ತೆಲಂಗಾಣ ಮಾಸ್ಟರ್ಸ್ ವೇಟ್ ಲಿಫ್ಟಿಂಗ್ ಅಸೋಸಿಯೇಷನ್ ಆಯೋಜಿಸಿದ್ದ 2023ನೇ ಸಾಲಿನ ‘ಸೌತ್ ಇಂಡಿಯನ್ ಮಾಸ್ಟರ್ಸ್ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್’ನಲ್ಲಿ ಪ್ರಥಮ ಸ್ಥಾನಗಳಿಸಿ, ಚಿನ್ನದ ಪದಕ ಗೆದ್ದಿರುವ ಕಿರಿಯ ಸಹಾಯಕಿ (ಮುದ್ರಣಾಲಯ) ಖುದ್ಸಿಯ ನಜೀರ್ ಅವರನ್ನು ವ್ಯವಸ್ಥಾಪಕ ನಿರ್ದೇಶಕರವರು ಅಭಿನಂದಿಸಿ ಗೌರವಿಸಿದರು. ಕಠಿಣವಾದ ಪರಿಶ್ರಮದ ಮೂಲಕ ವೇಟ್ ಲಿಫ್ಟಿಂಗ್ ಕ್ರೀಡೆಯಲ್ಲಿ ಈ ಸಾಧನೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದರು.
ಈ ಸಂದರ್ಭದಲ್ಲಿ ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ) ಪ್ರಶಾಂತ್ ಕುಮಾರ್ ಮಿಶ್ರ ಸಹಿತ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.