ಬೆಂಗಳೂರಿನ 3 ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕ್ಕಬಳ್ಳಾಪುರದವರಿಗೆ ಮೀಸಲಿಟ್ಟಿದ್ದ ಶೇ.25ರಷ್ಟು ಬೆಡ್‌ಗಳ ವಿಚಾರದಲ್ಲಿ ತಾಂತ್ರಿಕ ತೊಂದರೆ ಇವೆ. ಹಾಗಾಗಿ ಅದಕ್ಕೆ ಬದಲಾಗಿ ಬೆಂಗಳೂರಿನ ಆಸ್ಟರ್ ಆಸ್ಪತ್ರೆಯನ್ನು ಸಂಪೂರ್ಣವಾಗಿ ಬಳಕೆ..
ಚಿಕ್ಕಬಳ್ಳಾಪುರ: ಚಿಂತಾಮಣಿ ಹಾಗೂ ಶಿಡ್ಲಘಟ್ಟ ತಾಲೂಕುಗಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈಧ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಭೇಟಿ ನೀಡಿ, ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಹಾಗೂ ಸೌಲಭ್ಯಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದರು.
ಚಿಂತಾಮಣಿಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಮೊದಲಿಗೆ ಭೇಟಿ ನೀಡಿದ ಸಚಿವ, ಅಲ್ಲಿ ಕೋವಿಡ್ 19 ಲಸಿಕಾ ಕೇಂದ್ರವನ್ನು ಪರಿವೀಕ್ಷಿಸಿ ನಂತರ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿಯ ತಾಯಂದಿರೊಂದಿಗೆ ಮಾತನಾಡಿ ಆರೋಗ್ಯ ವಿಚಾರಿಸಿ, ಆಸ್ಪತ್ರೆಯ ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ, ಆಸ್ಪತ್ರೆಯಲ್ಲಿ ಸ್ವಚ್ಛತೆ, ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ, ಆಹಾರ, ಕುಡಿಯುವ ನೀರು ಕಾಲಕಾಲಕ್ಕೆ ಒದಗಿಸುವಂತೆ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
780 ಸ್ಪೆಷಲಿಸ್ಟ್ ಗಳ ನೇರ ನೇಮಕಾತಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಷ್ಟೇನು ವೈದ್ಯರ ಕೊರತೆ ಇಲ್ಲ. ಒಂದೆರಡು ದಿನದಲ್ಲಿ 780 ಸ್ಪೆಷಲಿಸ್ಟ್ ಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಎಲ್ಲಾ ತಾಲೂಕುಗಳಿಗೂ ಆಧ್ಯತೆ ಮೆರೆಗೆ ಇವರನ್ನು ನಿಯೋಜನೆ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಪ್ರತಿ ತಾಲೂಕಿಗೆ ಕನಿಷ್ಟ 5-6 ಅಂಬ್ಯಲೆನ್ಸ್ ಗಳು ಬೇಕಾಗಿದೆ. ಪ್ರಸ್ತುತ 16 ಆ್ಯಂಬುಲೆನ್ಸ್ ಗಳು ಇದ್ದು, ಇನ್ನೂ ಹೆಚ್ಚುವರಿ ಅಂಬ್ಯುಲೆನ್ಸ್ ಬೇಕು ಎಂಬ ಬೇಡಿಕೆ ಬಂದಿದೆ. ಅದಕ್ಕಾಗಿ ಎಸ್ ಡಿಆರ್ ಎಫ್ ಅನುದಾನದಲ್ಲಿ 15 ಆಂಬ್ಯುಲೆನ್ಸ್ ಖರೀದಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಕೋವಿಡ್ ರೋಗಿಗಳಿಗಾಗಿ ಬೆಂಗಳೂರಿನಲ್ಲಿ 3 ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಮೀಸಲಿಟ್ಟಿದ್ದ ಶೇ.25ರಷ್ಟು ಬೆಡ್ ಗಳಿಗೆ ಕೆಲವೊಂದು ತಾಂತ್ರಿಕ ದೋಷಗಳು ಇವೆ. ಹಾಗಾಗಿ ಅದಕ್ಕೆ ಬದಲಾಗಿ ಬೆಂಗಳೂರಿನ ಆಸ್ಟರ್ ಆಸ್ಪತ್ರೆಯನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಇಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಮಾತ್ರ 112 ಆಕ್ಸಿಜನ್ ಬೆಡ್ ಗಳು ಮೀಸಲಿದ್ದು, ಜಿಲ್ಲೆಯ ಜನರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನತೆಗೆ ಎಂವಿಜೆ ಮತ್ತು ಆಕಾಶ್ ವೈಧ್ಯಕೀಯ ಕಾಲೇಜುಗಳಲ್ಲಿ ಬೆಡ್ ಗಳನ್ನು ಮೀಸಲಿಡಲಾಗಿದೆ. ಜಿಲ್ಲೆಯ ಎಲ್ಲಾ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಒಟ್ಟಾರೆ 10,000 ಬೆಡ್ ಗಳ ವ್ಯವಸ್ಥೆ ಇದ್ದು, ಜಿಲ್ಲೆಯಲ್ಲಿ ಎಲ್ಲೂ ಬೆಡ್ ಸಮಸ್ಯೆ ಇಲ್ಲ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಾಗದಂತೆ ಹೆಚ್ಚುವರಿ ಸಿಲಿಂಡರ್ ಗಳನ್ನು ತರಲು ಪ್ರಯತ್ನಿಸಲಾಗುತ್ತಿದೆ. ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಆಕ್ಸಿಜನ್ ಘಟಕ ಹಾಗೂ ಆಕ್ಸಿಜನ್ ಜನರೇಟರ್ ಗಳನ್ನು ಸ್ಥಾಪಿಸಲು ಕ್ರಮ ವಹಿಸಲಾಗಿದೆ. ಈ ದಿಸೆಯಲ್ಲಿ ಸಿಎಸ್ ಆರ್ ಅನುದಾನದಲ್ಲಿ ಜಿಲ್ಲಾ ಕೇಂದ್ರಕ್ಕೆ ಅಗತ್ಯವಾದಷ್ಟು ಆಕ್ಸಿಜನ್ ಘಟಕ ಸ್ಥಾಪಿಸಲಾಗುವುದು. ಉಳಿದಂತೆ ಎಸಿಸಿ ಕಂಪನಿ ವತಿಯಿಂದ ಗೌರಿಬಿದನೂರಿನಲ್ಲಿ, ಟೈಟಾನ್ ಕಂಪನಿ ವತಿಯಿಂದ ಬಾಗೇಪಲ್ಲಿಯಲ್ಲಿ ಆಕ್ಸಿಜನ್ ಪ್ಲಾಂಟ್ ಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡಿದ್ದು, ಶಿಡ್ಲಘಟ್ಟದಲ್ಲೂ ಯಾವುದಾದರೊಂದು ಸಂಸ್ಥೆ ವತಿಯಿಂದ ಘಟಕ ಸ್ಥಾಪಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಿ.ಕೆ.ಮಿಥುನ್ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾ ಅರ್ಸಲನ್, ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ, ತಹಸೀಲ್ದಾರ್ ಹನುಂತರಾಯಪ್ಪ, ತಾಲೂಕು ವೈದ್ಯಾಧಿಕಾರಿಗಳಾದ ಡಾ.ಸ್ವಾತಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.