ರಾಯಚೂರು: ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿರುವ ಸಮುದಾಯ ಭವನವನ್ನು ಕೋವಿಡ್ ಕೇರ್ ಸೆಂಟರ್ ಗೆ ಬಳಕೆಮಾಡಿಕೊಳ್ಳಲು ನಿರ್ಧಾರಿಸಲಾಗಿದೆ.
ಗಣಿ ಮತ್ತು ಭೂವಿಜ್ಞಾನ ಸಚಿವ
ಮುರುಗೇಶ್ ಆರ್ ನಿರಾಣಿ ಅವರು ಸಲಹೆ ಮೇರೆಗೆ ಹಟ್ಟಿಯಲ್ಲಿರುವ ಸಮುದಾಯ ಭವನವನ್ನು ಕೋವಿಡ್ ಕೇರ್ ಸೆಂಟರ್‌ಗೆ ಬಳಕೆಮಾಡಿಕೊಳ್ಳಲು ಮುಂದಾಗಿದೆ.
ಹಟ್ಟಿಯ ಕ್ಯಾಂಪಸ್ ನಲ್ಲಿರುವ ಒಟ್ಟು 120 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಲ್ಲಿ 40 ಹಾಸಿಗೆಗಳನ್ನು ಆಮ್ಲಜನಕಯುಕ್ತ ಮಾಡಲು ನಿರ್ಧರಿಸಲಾಗಿದೆ.
ಈಗಾಗಲೇ ಹಟ್ಟಿ ಚಿನ್ನದ ಗಣಿ ವ್ಯವಸ್ಥಾಪಕ ನಿದೇರ್ಶಕರು ಸೇರಿದಂತೆ ಮತ್ತಿತರರ ಜೊತೆ ಸಚಿವ ನಿರಾಣಿ ಮಾತುಕತೆ ನಡೆಸಿದ್ದಾರೆ.
ಹಟ್ಡಿಯ ಚಿನ್ನದ ಗಣಿಯಲ್ಲಿ ಸಾವಿರಾರು ಕಾರ್ಮಿಕರು ಕೆಲಸ ನಿರ್ವಾಹಿಸುತ್ತಿದ್ದಾರೆ. ಅಲ್ಲದೆ ಗ್ರಾಮದಲ್ಲೂ ಸಾವಿರಾರು ಸಂಖ್ಯೆಯ ಜನರಿದ್ದು, ಯಾರಿಗಾದರೂ ಸೋಂಕು ಕಾಣಿಸಿಕೊಂಡರೆ ತಕ್ಷಣವೇ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಸಮುದಾಯ ಭವನ ಬಳಕೆಮಾಡಿಕೊಳ್ಳುವುದು ಸರಿಯಾದ ಮಾರ್ಗವೆಂದು ಸಚಿವರು ಸಲಹೆ ಕೊಟ್ಟಿದ್ದರು.
ಹಟ್ಟಿ ಚಿನ್ನದ ಗಣಿಯಲ್ಲಿ ಕೇಂದ್ರ ಸರಕಾರಿ ಒಡೆತನದ ಕೇಂದ್ರೀಯ ವಿದ್ಯಾಲಯವಿದ್ದು, ಇದನ್ನು ಸಹಾ ಕೋವಿಡ್ ಕೇರ್ ಸೆಂಟರ್ ಗೆ ಬಳಸಲು ಆಲೋಚಿಸಲಾಗಿದೆ. ಈ ಜಾಗವು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಒಡೆತನಕ್ಕೆ ಸೇರಿರುವ ಹಿನ್ನಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ನಿರಾಣಿ ಅವರು ಮಾತುಕತೆಯ ನಡೆಸಿದ್ದು, ಇದು ಕೂಡ ಫಲಪ್ರದವಾಗಿದೆ ಸಂಭವವಿದೆ.