ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಐದು ವರ್ಷದೊಳಗಿನ 60 ಲಕ್ಷ ಮಕ್ಕಳಿಗೆ ಪೊಲೀಯೋ ಲಸಿಕೆ ಹಾಕಿಸಲಾಗುತ್ತಿದೆ. ಸಿಬ್ಬಂದಿ ಅಗತ್ಯತೆ ಇರುವುದರಿಂದ ಈ ನಾಲ್ಕು ದಿನ ಕೋವಿಡ್ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪೋಷಕರು ಎಷ್ಟು ಬಾರಿ ಲಸಿಕೆ ಹಾಕಿಸಿದರೂ ಮತ್ತೆ ಲಸಿಕೆ ಹಾಕಿಸಬೇಕು. ಕೆಲವೆಡೆ ಮೊಬೈಲ್ ಘಟಕದ ವ್ಯವಸ್ಥೆ ಮಾಡಲಾಗಿದೆ ಎಂದರು. ಕಳೆದ 11 ವರ್ಷದಲ್ಲಿ ಹೊಸ ಪೋಲಿಯೋ ಪ್ರಕರಣ ದಾಖಲಾಗಿಲ್ಲ. ಆದರೆ ಪಾಕಿಸ್ತಾನ, ಅಫ್ಘನಿಸ್ತಾನ ದೇಶಗಳಲ್ಲಿ ಈ ರೋಗ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ನೀಡಲಾಗುತ್ತಿದೆ ಎಂದರು.
ಕೋವಿಡ್ ಬಂದ ಬಳಿಕ ಆರ್ಥಿಕ ಸಂಕಷ್ಟ ಉಂಟಾಗಿದೆ. ಇಂತಹ ಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸದೃಢ ದೇಶ ನಿರ್ಮಿಸುತ್ತಿದ್ದಾರೆ. ಈ ಬಾರಿ ಬಿಡುಗಡೆಯಾದ ಆರ್ಥಿಕ ಸಮೀಕ್ಷೆಯಲ್ಲಿ ಆಶಾದಾಯಕ ಅಂಶಗಳು ಕಂಡುಬಂದಿವೆ. ಈ ಬಾರಿ ಆಶಾದಾಯಕವಾದ ಬಜೆಟ್ ಮಂಡನೆಯಾಗಲಿದೆ. ಮುಂದಿನ ವರ್ಷದಲ್ಲಿ ಆರ್ಥಿಕ ಚೇತರಿಕೆಯ ವೇಗ ಹೆಚ್ಚಲಿದೆ ಎಂದರು.