ಕನ್ನಡ ನೆಲವನ್ನು ಮಹಾರಾಷ್ಟ್ರ ಸರ್ಕಾರವು ತನ್ಬದೆಂದು ಕೇಳುತ್ತಿದೆ. ಆದರೆ ಆ ನಾಡಿನ ಆರಾಧ್ಯ ಪುರುಷ ಶಿವಾಜಿಯೇ ಕನ್ನಡದ ವಂಶದವರು..!
ಬೆಳಗಾವಿ: ಗಡಿ ವಿವಾದವನ್ನು ಕೆದಕುತ್ತಿರುವ ಮಹಾರಾಷ್ಟ್ರದ ನಾಯಕರು ಬೆಳಗಾವಿಯನ್ನು ಮಹಾರಾಷ್ಟ್ರದ ಭಾಗವೆಂದು ಹೇಳುತ್ತಿದ್ದರೆ, ಇತ್ತ ಕರುನಾಡಿನ ನಾಯಕರು ಮರಾಠಿಗರ ಆರಾಧನಾ ಪುರುಷ ಶಿವಾಜಿಯನ್ನೇ ಕರ್ನಾಟಕಕ್ಕೆ ಸೇರಿದವರು ಎಂದು ಹೇಳುವ ಮೂಲಕ ಮರಾಠಿಗರನ್ನೇ ಅಚ್ಚರಿಗೊಳಿಸಿದ್ದಾರೆ.
ಹಾಗಾದರೆ ಛತ್ರಪತಿ ಶಿವಾಜಿ ಮಹಾರಾಜ್ ಕನ್ನಡಿಗರೇ?
ಹೌದು ಎನ್ನುತ್ತಿದೆ ರಾಜ್ಯದ ಇತಿಹಾಸ. ಈ ಇತಿಹಾಸದ ಪುಟವನ್ನು ಕರ್ನಾಟಕದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಂದು ಅನಾವರಣಗೊಳಿಸಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರ ಮೂಲ ನೆಲ ಕರ್ನಾಟಕ. ಅವರದ್ದು ಕನ್ನಡಿಗರ ವಂಶ ಎಂದು ಕಾರಜೋಳ ಸಾರಿದ್ದಾರೆ.
ಬೆಲಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಾಜಿಯ ಮೂಲದ ಬಗ್ಗೆ ಮಾಹಿತಿ ಹಂಚಿಕೊಂಡರು. ಛತ್ರಪತಿ ಶಿವಾಜಿ ಮಹಾರಾಜರು ಕರ್ನಾಟಕ ಮೂಲದವರು. ಇವರ ವಂಶದ ಮೂಲ ಕರ್ನಾಟಕದಲ್ಲಿತ್ತು. ಆ ವಂಶದ ಮೂಲಪುರುಷ ಬೆಳ್ಳಿಯಪ್ಪ ಅವರು ಗದಗ ಜಿಲ್ಲೆಯ ಸೊರಟೂರಿನವರು. ಒಂದೊಮ್ಮೆ ಕರ್ನಾಟಕದಲ್ಲಿ ಬರಗಾಲ ಇದ್ದಾಗ ಬೆಳ್ಳಿಯಪ್ಪ ಅವರು ಮಹಾರಾಷ್ಟ್ರಕ್ಕೆ ಗುಳೆ ಹೋಗಿದ್ದರು. ಅನಂತರ ಹೋದ ಬೆಳ್ಳಿಯಪ್ಪ ಮಹಾರಾಷ್ಟ್ರದಲ್ಲೇ ನೆಲೆಸಿದರು. ಈ ವಂಶದ ನಾಲ್ಕನೇ ತಲೆಮಾರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರು. ಈ ಬಗ್ಗೆ ಉದ್ಧವ್ ಠಾಕ್ರೆ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳುವ ಮೂಲಕ ಗೋವಿಂದ ಕಾರಜೋಳ ಅವರು ಹೇಳಿದರು.
ಉದ್ಧವ್ ಠಾಕ್ರೆ ನೇತೃತ್ವದ ಸಮ್ಮಿಶ್ರ ಸರ್ಕಾರ ಕನ್ನಡಿಗರನ್ನು ಕೆರಳಿಸುವ ಹೇಳಿಕೆ ನೀಡುತ್ತಿದೆ. ವಿವಾದಾತ್ಮಕ ಹೇಳಿಕೆ ನೀಡಿ ಮಹಾರಾಷ್ಟ್ರದ ಜನರನ್ನು ಮೆಚ್ಚಿಸುವ ಕೆಲಸವನ್ನು ಅಲ್ಲಿನ ಸಿಎಂ ಮಾಡುತ್ತಿದ್ದಾರೆ. ಅವರಿಗೆ ಇತಿಹಾಸ ಗೊತ್ತಿದೆಯೇ ಎಂದು ಡಿಸಿಎಂ ಕಾರಜೋಳ ತರಾಟೆಗೆ ತೆಗೆದುಕೊಂಡರು.