ಮದುವೆಯ ಸಿದ್ದತೆಯ ಸಡಗರದಲ್ಲಿದ್ದಾಗಲೇ ಸಾವಿನ ಹಾದಿ ಹಿಡಿದ ಯುವಕ; ರೈಲು ಹಳಿಯಲ್ಲಿ ಶವ ಪತ್ತೆ
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಮುತ್ತುರ್ ಬಳಿ ಯುವಕನೊಬ್ಬ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಸಾವಿಗೆ ಶರಣಾಗಿದ್ದಾನೆ. ಸುಮಾರು 28 ವರ್ಷ ಪ್ರಾಯದ ಯುವಕನ ಶವ ರೈಲು ಹಳಿಯ ಬಳಿ ಪತ್ತೆಯಾಗಿದ್ದು ಮೃತನನ್ನು ಆಂಧ್ರಪ್ರದೇಶ ಮೂಲದ ಹರಿ ಎಂದು ಪೊಲೀಸರು ಗುರುತಿಸಿದ್ದಾರೆ.
ಈತ ಹೈದರಾಬಾದ್ ನಿಂದ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದು, ಬೆಂಗಳೂರಿನಲ್ಲಿ ತಾನು ಮದುವೆ ನಿಶ್ಚಯ ಯಾಗಿದ್ದ ಹುಡುಗಿ ನೋಡಲು ತೆರಳಿದ್ದ. ಆ ಸಂದರ್ಭದಲ್ಲಿ ಹುಡುಗಿ ಮನೆಯವರು ಮದುವೆ ಸಮಾರಂಭದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಲ್ಲ ಎನ್ನಲಾಗಿದೆ. ಇದರಿಂದ ಮದುವೆಯೇ ರದ್ದಾಗುತ್ತದೆ ಎಂದು ಭಾವಿಸಿದ ಈತ ಈ ರೀತಿ ಆತುರದ ತೀರ್ಮಾನ ಕೈಗೊಂಡಿರಬಹುದೆಂದು ಸಂಬಂಧಿಕರು ಹೇಳಿಕೊಂಡಿದ್ದಾರೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.