ಶಿವಮೊಗ್ಗ: ಬಿಎಸ್‌ವೈ ನೇತೃತ್ವದ ರಾಜ್ಯ ಸರ್ಕಾರಕ್ಕೆ ಹೈಕಮಾಂಡ್ ಮತ್ತೊಮ್ಮೆ ಶಹಬ್ಬಾಸ್ ಎಂದಿದೆ. ಶಿವಮೊಗ್ಗದಲ್ಲಿನ ಬಿಜೆಪಿ ಕಾರ್ಯಕಾರಿಣಿಯ ವಿಶೇಷ ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಯಡಿಯೂರಪ್ಪ ಅವರ ಸರ್ಕಾರ ಹಾಗೂ ಸಂಪುಟದ ಕಾರ್ಯವೈಖರಿಯನ್ನು ಕೊಂಡಾಡಿದರು.
ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ವಿಶೇಷ ಸಭೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಕರ್ನಾಟಕ ಸರಕಾರವು ಯಡಿಯೂರಪ್ಪ ನೇತೃತ್ವದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು. ಸರಕಾರದ ಬಗ್ಗೆ ಪಕ್ಷದವರು ಹೊರಗಡೆ ಮಾತನಾಡಬಾರದು ಎಂದು ಸೂಚಿಸಿದ ಅವರು, ಚಪ್ಪಾಳೆ ತಟ್ಟಿ ಬಿಎಸ್‌ವೈ ಅವರನ್ನು ಅಭಿನಂದಿಸಲು ಮನವಿ ಮಾಡಿದರು.
ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಮೂರನೇ ಎರಡರಷ್ಟು ಶಾಸಕರ ಸ್ಥಾನ ಗೆದ್ದು ಪಕ್ಷ ಅಧಿಕಾರಕ್ಕೇರಲಿದೆ ಎಂದು ಅರುಣ್ ಸಿಂಗ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಪಕ್ಷವನ್ನು ಹೆಚ್ಚಿನ ಬಹುಮತದೊಂದಿಗೆ ಅಧಿಕಾರಕ್ಕೆ ತರಲು ಪರಿಶ್ರಮ ಮತ್ತು ಪ್ರವಾಸ ಅತ್ಯಗತ್ಯ. ತಿಂಗಳಲ್ಲಿ ಏಳು ದಿನ ಕಾರ್ಯಕರ್ತರನ್ನು ಭೇಟಿ ಮಾಡಿ ಮತ್ತು ಪಕ್ಷಕ್ಕಾಗಿ ನಿಮ್ಮನ್ನು ತೊಡಗಿಸಿಕೊಳ್ಳಿ ಎಂದು ನಾಯಕರಿಗೆ ಸಲಹೆ ಮಾಡಿದರು
ದೇಶದ ಅಭಿವೃದ್ಧಿಗಾಗಿ ಒಂದು ದೇಶ ಒಂದು ತೆರಿಗೆ ಇರಬೇಕು. ಹಾಗೆಯೃ ಒಂದು ದೇಶ ಒಂದೇ ಚುನಾವಣೆ ಬಗ್ಗೆ ಚರ್ಚೆ ನಡೆಸಲು ಇದು ಸಕಾಲ ಎಂದು ಅಭಿಪ್ರಾಯಪಟ್ಟರು. ಈಗ ಹೆಚ್ಚಿನ ಸಮಯವನ್ನು ನಾವು ಚುನಾವಣೆಗೆ ಮೀಸಲಾಗಿ ಇಡಬೇಕಾಗುತ್ತಿದೆ. ಚುನಾವಣಾ ಕಾರ್ಯದಿಂದ ಶಿಕ್ಷಕರು, ಪೊಲೀಸ್ ವ್ಯವಸ್ಥೆ ತೊಂದರೆಗೆ ಸಿಲುಕುತ್ತದೆ. ಅಭಿವೃದ್ಧಿ ಕಾರ್ಯ ಸ್ಥಗಿತಗೊಳ್ಳುತ್ತದೆ ಎಂದೂ ಅರುಣ್ ಸಿಂಗ್ ಅಭಿಪ್ರಾಯಪಟ್ಟರು.