ಮುಂಬೈ: ಕೇಂದ್ರ ಸರ್ಕಾರದ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಗೆ ಶರದ್ ಪವಾರ್ ನೇತೃತ್ವದ ಎನ್ಸಿಪಿ ಬೆಂಬಲ ಘೋಷಿಸಿದೆ. ಈ ಮೂಲಕ ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಹಿನ್ನಡೆಯಾಗಿದೆ.
ಮುಂಬೈನಲ್ಲಿ ಶರದ್ ಪವಾರ್ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಎನ್ಸಿಪಿ ನಾಯಕ ಜಿತೇಂದ್ರ ಅವ್ಹಾದ್, ಕ್ಷೇತ್ರ ಮರುವಿಂಗಡಣೆ ಸಾಂವಿಧಾನಿಕ ಅಗತ್ಯವಾಗಿದ್ದು, ಈ ಪ್ರಕ್ರಿಯೆಯನ್ನು ಪಕ್ಷ ಬೆಂಬಲಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ನವೆಂಬರ್ 30ರಿಂದ ಡಿಸೆಂಬರ್ 3ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದ್ದು, ಕ್ಷೇತ್ರ ಮರುವಿಂಗಡಣೆ ವಿಧೇಯಕ ಮಂಡನೆಯಾಗುವ ನಿರೀಕ್ಷೆಯಿದೆ. ವಿಧೇಯಕಕ್ಕೆ ಬೆಂಬಲ ನೀಡಲು ಸುಪ್ರಿಯಾ ಸುಳೆ ಮೂರು ಷರತ್ತುಗಳನ್ನು ವಿಧಿಸಿದ್ದರು. ಮಹಿಳಾ ಮೀಸಲಾತಿ ಜಾರಿ, ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಏಕರೂಪವಾಗಿ ಶೇ.50ರಷ್ಟು ಹೆಚ್ಚಿಸುವುದು ಹಾಗೂ ಕ್ಷೇತ್ರ ಮರುವಿಂಗಡಣೆ ಆಯೋಗದಲ್ಲಿ ವಿರೋಧ ಪಕ್ಷಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡುವುದು ಅವುಗಳಾಗಿವೆ.

ದೇಶಾದ್ಯಂತ ಲೋಕಸಭಾ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಆದರೆ, ಇಂಡಿಯಾ ಮೈತ್ರಿಕೂಟದ ಹಲವು ಪಕ್ಷಗಳು ಈ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿವೆ.
ಶನಿವಾರದ ಮೈತ್ರಿಕೂಟದ ಸಭೆಯಲ್ಲಿ ಎನ್ಸಿಪಿ ಭಾಗವಹಿಸಲಿದೆ. ಅನಾರೋಗ್ಯದ ಕಾರಣ ಶರದ್ ಪವಾರ್ ಗೈರಾಗಲಿದ್ದು, ಪಕ್ಷದ ಸಂಸದರು ಹಾಜರಾಗಲಿದ್ದಾರೆ ಎಂದು ಸುಪ್ರಿಯಾ ಸುಳೆ ತಿಳಿಸಿದ್ದಾರೆ. ನವೆಂಬರ್ 30ರಿಂದ ಸದನದಲ್ಲಿ ಹಾಜರಿರುವಂತೆ ಎನ್ಸಿಪಿ-ಎಸ್ಪಿ ತನ್ನ ಎಂಟು ಲೋಕಸಭಾ ಸಂಸದರಿಗೆ ವಿಪ್ ಜಾರಿ ಮಾಡಿದೆ.















































































