ಬೆಂಗಳೂರು: ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (ಬಿಎಸ್ಡಬ್ಲ್ಯುಎಂಎಲ್) ಕೈಗೊಂಡಿರುವ ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ, ಅಧಿಕಾರ ದುರ್ಬಳಕೆ ಹಾಗೂ ಗುತ್ತಿಗೆದಾರರೊಂದಿಗೆ ಶಾಮೀಲಾತಿ ನಡೆದಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.
ಬೆಂಗಳೂರು ಮಹಾನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರ ಗುತ್ತಿಗೆದಾರರ ಸಂಘದ ಮುಖಂಡರು ನವೆಂಬರ್ 17ರಂದು ದೂರು ಸಲ್ಲಿಸಿ, ಬಿಎಸ್ಡಬ್ಲ್ಯುಎಂಎಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ, ಮುಖ್ಯ ಪ್ರಧಾನ ವ್ಯವಸ್ಥಾಪಕ ಎಸ್.ವಿ. ರಾಜೇಶ್, ಉಪ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ್ ಹಾಗೂ ಸಹಾಯಕ ಎಂಜಿನಿಯರ್ ನೀಲೇಶ್ ಕುಮಾರ್ ವಿರುದ್ಧ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
2025ರ ಜುಲೈ 30ರಂದು 33 ಪ್ಯಾಕೇಜ್ಗಳಿಗೆ ಟೆಂಡರ್ ಆಹ್ವಾನಿಸಲಾಗಿತ್ತು. ಬಳಿಕ 22 ಪ್ರತ್ಯೇಕ ಟೆಂಡರ್ ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ (ಕೆಟಿಪಿಪಿ) ಹಾಗೂ ಹಣಕಾಸು ಇಲಾಖೆಯ ಸುತ್ತೋಲೆಗಳನ್ನು ಉಲ್ಲಂಘಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮದ ಆರೋಪ
ಅರ್ಹತೆ ಇಲ್ಲದ ಬಿಡ್ದಾರರನ್ನು ಆಯ್ಕೆ ಮಾಡಿರುವುದು, ಅವಧಿ ಮುಗಿದ ಬ್ಯಾಂಕ್ ಗ್ಯಾರಂಟಿ ಹೊಂದಿದ್ದ ಗುತ್ತಿಗೆದಾರರಿಗೆ ಕಾಮಗಾರಿ ನೀಡಿರುವುದು ಹಾಗೂ ಕಾಮಗಾರಿ ಆರಂಭಿಸಲು ಹೆಚ್ಚುವರಿ ಕಾಲಾವಕಾಶ ನೀಡಿರುವುದು ಟೆಂಡರ್ ನಿಯಮಗಳ ಉಲ್ಲಂಘನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಿಡ್ ಸಲ್ಲಿಕೆಯಾದ ಬಳಿಕ ವಾಹನಗಳ ತಾಂತ್ರಿಕ ಮಾನದಂಡಗಳನ್ನು ಸಡಿಲಿಸಲಾಗಿದೆ ಎಂಬ ಆರೋಪವೂ ಇದೆ.
ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಪಾವತಿಯಲ್ಲಿ ಬಾಕಿ ಹೊಂದಿರುವ ಆರೋಪ ಎದುರಿಸುತ್ತಿರುವ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆನ್ಲೈನ್ ಮೂಲಕ ನಡೆಯಬೇಕಿದ್ದ ದರ ಮಾತುಕತೆ ಹಾಗೂ ಕಾರ್ಯಾದೇಶ ನೀಡುವ ಪ್ರಕ್ರಿಯೆಯನ್ನು ನಿಗದಿತ ಪೋರ್ಟಲ್ ಬದಲಿಗೆ ಕೈಯಾರೆ ನಡೆಸಲಾಗಿದೆ ಎಂಬ ಆರೋಪವನ್ನೂ ಮಾಡಲಾಗಿದೆ.
ಸರ್ಕಾರದ ಬೊಕ್ಕಸಕ್ಕೆ ಹೊರೆ?
ಅಂದಾಜು ಟೆಂಡರ್ ಮೊತ್ತಕ್ಕಿಂತ ಶೇ 14ರಷ್ಟು ಹೆಚ್ಚಿನ ದರದಲ್ಲಿ ಕಾಮಗಾರಿ ನೀಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು ₹350 ಕೋಟಿ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆಯಿದೆ ಎಂದು ದೂರುದಾರರು ಹೇಳಿದ್ದಾರೆ. ಟೆಂಡರ್ ಅಂದಾಜಿನಲ್ಲಿ ಹೆಚ್ಚುವರಿ ವೆಚ್ಚ, ಟೆಂಡರ್ ಪ್ರೀಮಿಯಂ ಹಾಗೂ ಏಳು ವರ್ಷಗಳ ವಾರ್ಷಿಕ ದರ ಏರಿಕೆ ಅಂಶಗಳನ್ನು ಸೇರಿಸಿರುವುದರಿಂದ ಸುಮಾರು ₹660 ಕೋಟಿ ಆರ್ಥಿಕ ನಷ್ಟ ಉಂಟಾಗಬಹುದು ಎಂಬ ಆರೋಪವನ್ನೂ ಮಾಡಿದ್ದಾರೆ.
ಸೆಪ್ಟೆಂಬರ್ 22ರಿಂದ ಅಕ್ಟೋಬರ್ 31, 2026ರವರೆಗೆ ಜಾರಿಯಲ್ಲಿದ್ದ ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ಟೆಂಡರ್ ಪ್ರಕ್ರಿಯೆ ಮುಂದುವರಿಸಿ ಕಾರ್ಯಾದೇಶ ನೀಡಿರುವುದರ ಬಗ್ಗೆಯೂ ದೂರಿನಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಟೆಂಡರ್ ದಾಖಲೆಗಳು, ಹಣಕಾಸು ಬಿಡ್ಗಳು, ಅನುಮೋದನೆಗಳು ಹಾಗೂ ಸಂಬಂಧಿತ ಪತ್ರವ್ಯವಹಾರಗಳನ್ನು ಪರಿಶೀಲಿಸಿ ಸ್ವತಂತ್ರ ತನಿಖೆ ನಡೆಸಬೇಕು. ಆರೋಪಗಳು ಸಾಬೀತಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಲೋಕಾಯುಕ್ತರನ್ನು ಕೋರಲಾಗಿದೆ.















































































