ಪ್ಯಾಲೇಸ್ ಬಳಿ ಸೆಲ್ಫೀ ಮೂಡ್‌ನಲ್ಲಿದ್ದ ಪ್ರವಾಸಿಗರು.. ಇದ್ದಕ್ಕಿದ್ದಂತೆ ಅಪ್ಪಳಿಸಿದ ಸಿಡಿಲು.. ಕ್ಷಣಾರ್ಧದಲ್ಲೇ ಸೂತಕದ ಮನೆಯಾದ ಐತಿಹಾಸಿಕ ಅರಮನೆ..
ಜೈಪುರ: ಇದು ಮಳೆಗಾಲ. ಒಂದಿಲ್ಲೊಂದು ಅವಾಂತರ ಅವಘಡಕ್ಕೆ ಸಾಕ್ಷಿಯಾಗುತ್ತಿರುವ ಈ ವರ್ಷಕಾಲದಲ್ಲಿ, ಭೀಕರ ಅವಘಡವೊಂದು ಒಂದೇ ಕ್ಷಣದಲ್ಲಿ ಬರೋಬ್ಬರಿ 11 ಮಂದಿಯನ್ನು ಬಲಿ ತೆಗೆದುಕೊಂಡಿದೆ.
ಈ ಅವಘಡ ನಡೆದದ್ದು ಜೈಪುರದ ಇತಿಹಾಸ ಪ್ರಸಿದ್ದ ಅಮರ್ ಪ್ಯಾಲೇಸ್ ಬಳಿ. ಲನ್‌ಲಾಕ್ ನಂತರ ಪ್ರವಾಸೀ ತಾಣಗಳಿಗೆ ಜನರು ಲಗ್ಗೆ ಇಡುತ್ತಿದ್ದು, ಜೈಪುರದ ಐತಿಹಾಸಿಕ, 12ನೇ ಶತಮಾನದ ಅಮೆರ್ ಪ್ಯಾಲೇಸ್ ಬಳಿಯೂ ಭಾನುವಾರ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡುಬಂದಿದ್ದರು.
ಭಾನುವಾರ ಸಂಜೆ ಇದ್ದಕ್ಕಿದ್ದಂತೆ ಸಿಡಿಲು ಬಡಿದಿದೆ. ಈ ಸಂದರ್ಭದಲ್ಲಿ ಪ್ಯಾಲೇಸ್‌ನ ವಾಚ್ ಟವರ್‌ನಲ್ಲಿ ಸೆಲ್ಫೀ ತೆಗೆಯುತ್ತಿದ್ದ ಜನರಿದ್ದ ತಂಡಕ್ಕೆ ಸಿಡಿಲು ಅಪ್ಪಲಿಸಿದೆ. ಮಳೆಯ ನಡುವೆ 25ಕ್ಕೂ ಹೆಚ್ಚು ಮಂದಿ ಸೆಲ್ಫೀ ಮೂಡ್‌ನಲ್ಲಿದ್ದಾಗ ಸಿಡಿಲು ಬಡಿದಿದ್ದು, 11 ಮಂದಿ ಸಾವನ್ಬಪ್ಪಿದ್ದಾರೆ. ಹಲವರು ಗಾಯಗೊಂಡು ಆಸ್ಪತ್ರೆಪಾಲಾಗಿದ್ದಾರೆ. ಈ ದುರ್ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ರಾಜಸ್ಥಾನ ಸರ್ಕಾರ ಮೃತರ ಕುಟುಂಬದವರಿಗೆ ತಲಾ 5ಲಕ್ಷ ರೂಪಾಯಿ ಪರಿಹಾರ ಪ್ರಕಟಿಸಿದೆ.