ಬೆಂಗಳೂರು: ಕೊರೋನಾ ಪರಿಸ್ಥಿತಿ ಇನ್ನೂ ಸುಧಾರಿಸಿಕೊಳ್ಳದಿದ್ದರೂ ರಾಜ್ಯ ಸರ್ಕಾರ ಖಾಸಗಿ ಶಾಲೆಗಳ ಲಾಭಿಗೆ ಮಣಿದು ಒಂದನೇ ತರಗತಿಂದ ಶಾಲಾರಂಭಕ್ಕೆ ಮುಂದಾಗಿದೆ ಎಂದು ಕನ್ನಡ ಪರ ಸಂಘಟನೆಗಳು ಆರೋಪಿಸಿವೆ. ಅದರಲ್ಲೂ ನ್ಯಾಯಪರ ವೇದಿಕೆಯ ಮಹಿಳಾ ಘಟಕವು ರಾಜ್ಯ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದೆ. ಎಲ್ಲಾ ವಿಚಾರಗಳಿಗೂ ಕೋವಿಡ್ ಲಸಿಕೆ ಕಡ್ಡಾಯ ಮಾಡುವ ಸರ್ಕಾರ ಶಾಲಾ ಮಕ್ಕಳ ವಿಚಾರದಲ್ಲಿ ಲಸಿಕೆಯ ಅಗತ್ಯದ ಬಗ್ಗೆ ಪರಿಶೀಲಿಸಿಲ್ಲ ಏಕೆ ಎಂದು ರಾಷ್ಟ್ರೀಯ ಮಹಿಳಾ ನ್ಯಾಯಪರ ವೇದಿಕೆ ಪ್ರಶ್ನಿಸಿದೆ.
ಕೋವಿಡ್ ಪರಿಸ್ಥಿತಿಯ ನಡುವೆಯೇ 1ರಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಶಾಲಾರಂಭ ಮಾಡಲು ಮುಂದಾಗಿರುವ ಸರ್ಕಾರದ ನಡೆ ಖಂಡಿಸಿ ವಿವಿಧ ಸಂಘಟನೆಗಳು ಹಾಗೂ ಪೋಷಕರ ಜೊತೆ, ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರಾಷ್ಟ್ರೀಯ ಮಹಿಳಾ ನ್ಯಾಯಪರ ವೇದಿಕೆ ಅಧ್ಯಕ್ಷೆ ಡಾ. ನ್ಯಾಯಪರ ಸವಿತಾ ತಿಳಿಸಿದ್ದಾರೆ.
ಇದೇ ವೇಳೆ, ಮುಖ್ಯಮಂತ್ರಿ, ಶಿಕ್ಷಣ ಸಚಿವರು ಹಾಗೂ ಆರೋಗ್ಯ ಸಚಿವರಿಗೆ ಪತ್ರ ಬರೆದಿರುವ ರಾಷ್ಟ್ರೀಯ ಮಹಿಳಾ ನ್ಯಾಯಪರ ವೇದಿಕೆ ಅಧ್ಯಕ್ಷೆ ಡಾ. ನ್ಯಾಯಪರ ಸವಿತಾ, ಮಕ್ಕಳಿಗೆ ವ್ಯಾಕ್ಸಿನೇಷನ್ ವ್ಯವಸ್ಥೆ ಆಗುವವರೆಗೂ 10 ವರ್ಷದೊಳಗಿನ ಮಕ್ಕಳಿಗೆ ಬೌತಿಕ ತರಗತಿ ಆರಂಭಿಸಬಾರದು ಎಂದು ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ನ್ಯಾಯಪರ ವೇದಿಕೆಯ ಪತ್ರದಲ್ಲೇನಿದೆ?
ಕೋವಿಡ್ 19 ಸೋಂಕಿಗೆ ಅವೆಷ್ಟೋ ಮಂದಿ ಬಲಿಯಾಗಿದ್ದು, ಆ ಆತಂಕದ ಪರಿಸ್ಥಿತಿ ಇನ್ನೂ ದೂರವಾಗದ ಕಾರಣ ಮಾರ್ಗಸೂಚಿ ನಿಯಮಗಳನ್ನೂ ಸರ್ಕಾರ ಸಂಪೂರ್ಣವಾಗಿ ಸಡಿಲಿಸಿಲ್ಲ. ಆದರೂ ಲಸಿಕೆ ಪಡೆಯದ 10 ವರ್ಷದೊಳಗಿನ ಮಕ್ಕಳಿಗೆ ಶಾಲೆ ಆರಂಭಿಸುವುದು ಸೂಕ್ತವಲ್ಲ .
ದೇಶದಲ್ಲಿ ಕೋವಿಡ್-19 ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ನವೆಂಬರ್ನಲ್ಲಿ 3ನೇ ಅಲೆ ಇರಬಹುದೆಂದೂ, ಅದು ಕೋವಿಡ್ ಮೂರನೇ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇನ್ನೂ ಅನೇಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿರುವುದು ಸರ್ಕಾರಕ್ಕೆ ತಿಳಿದಿದೆ. ಹೀಗಿದ್ದರೂ ಕೂಡಾ ಕರ್ನಾಟಕ ಸರ್ಕಾರ ಶಾಲಾರಂಭದ ಬಗ್ಗೆ ಪೋಷಕರ ಹಾಗೂ ಸರ್ಕಾರೇತರ ಸಂಸ್ಥೆಗಳ ಅಭಿಪ್ರಾಯ ಪಡೆಯದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ.
ಕರ್ನಾಟಕದಲ್ಲಿ 6ನೇ ತರಗತಿ ಆರಂಭವಾಗಿದ್ದು ಸರ್ಕಾರದ ನಿರ್ಧಾರದಿಂದ ಮಕ್ಕಳಿಗೆ ಪ್ರಾಣ ಭೀತಿ ಕಾಡಿದೆ. ಇದೇ ಸಂದರ್ಭದಲ್ಲಿ 1ರಿಂದ 5ನೇ ತರಗತಿವೆರೆಗಿನ ಶಾಲೆಗಳ ಆರಂಭಕ್ಕೆ ಮುಂದಾಗಿರುವುದಕ್ಕೆ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.
ಕಳೆದ ವರ್ಷ ಶಾಲಾರಂಭ ಮಾಡುವ ವಿಚಾರದಲ್ಲಿ ಪೋಷಕರ ಅಭಿಪ್ರಾಯ ಕೇಳಿರುವ ಸರ್ಕಾರ ಈ ವರ್ಷ ಆ ಕ್ರಮಕ್ಕೆ ಮುಂದಾಗಿಲ್ಲವೇಕೆ? ಕಳೆದ ವರ್ಷ ಶಾಲಾರಂಭಕ್ಕೆ ಪೋಷಕರ ಆಕ್ಷೇಪ ಇತ್ತು. ಈ ವರ್ಷವೂ ಅದೇ ರೀತಿ ಅಭಿಪ್ರಾಯ ಕೇಳಿಬಂದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಭಿಗೆ ಮಣಿಯಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಶಿಕ್ಷಣ ಸಚಿವರೇ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆಯೇ ಎಂಬ ಅನುಮಾನ ಇದೆ.
ವಿದೇಶಗಳಿಗೆ ತೆರಳಲು ವ್ಯಾಕ್ಸಿನೇಷನ್ ಅಗತ್ಯವಿದೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಕೊರೋನಾ ಲಸಿಕೆ ಪಡೆದಿರಲೇಬೇಕು ಎಂದು ಹೇಳುತ್ತಿರುವ ಸರ್ಕಾರ ಶಾಲೆಗಳ ವಿಚಾರದಲ್ಲಿ ವ್ಯತಿರಿಕ್ತ ನಿಲುವು ತಾಳಿರುವುದು ಸರಿಯಲ್ಲ. ಹಾಗಾಗಿ ಮಕ್ಕಳಿಗೆ ವ್ಯಾಕ್ಸಿನೇಷನ್ ವ್ಯವಸ್ಥೆ ಆಗುವವರೆಗೂ 10 ವರ್ಷದೊಳಗಿನ ಮಕ್ಕಳಿಗೆ ಬೌತಿಕ ತರಗತಿ ಆರಂಭಿಸಬಾರದು ಎಂದು ಸರ್ಕಾರಕ್ಕೆ ಮನವಿ.