ಬೆಂಗಳೂರು: ರಾಜ್ಯ ಸರ್ಕಾರ ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತ ಮನಿವಣ್ಣನ್ ಪಿ. ಅವರಿಗೆ ಬೆಂಗಳೂರು ನಗರ ಭೂ ಸಾರಿಗೆ ನಿರ್ದೇಶನಾಲಯದ (ಡಲ್ಟ್) ಆಯುಕ್ತ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.
ನವದೆಹಲಿಯ ಕರ್ನಾಟಕ ಭವನದ ರೆಸಿಡೆಂಟ್ ಕಮಿಷನರ್ ಹುದ್ದೆಯಿಂದ ಇಂಕೊಂಗ್ಲಾ ಜಮೀರ್ ಎಂ. ಅವರನ್ನು ವರ್ಗಾವಣೆ ಮಾಡಿ ಕರ್ನಾಟಕ ಭವನದ ಸಮನ್ವಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಡಾ. ಪ್ರಸಾದ್ ಎನ್.ವಿ. ಅವರನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಸಮೀರ್ ಶುಕ್ಲಾ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ನವದೆಹಲಿಯ ಕರ್ನಾಟಕ ಭವನದ ರೆಸಿಡೆಂಟ್ ಕಮಿಷನರ್ ಆಗಿ ವರ್ಗಾವಣೆ ಮಾಡಲಾಗಿದೆ.

ತುಳಸಿ ಮದ್ದಿನೇನಿ ಅವರನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ಶಿವಕುಮಾರ್ ಕೆ.ಬಿ. ಹಾಗೂ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ರಘುನಂದನ್ ಮೂರ್ತಿ ಅವರನ್ನು ನೇಮಕ ಮಾಡಲಾಗಿದೆ.
ಡಾ. ರಾಮ ಪ್ರಸಾತ್ ಮನೋಹರ್ ವಿ. ಅವರಿಗೆ ಪ್ರವಾಸೋದ್ಯಮ ಆಯುಕ್ತ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಕೃಷಿ ಇಲಾಖೆಯ ಆಯುಕ್ತರಾಗಿ ಡಾ. ಸತೀಶ ಬಿ.ಸಿ. ಅವರನ್ನು ನೇಮಕ ಮಾಡಲಾಗಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) ಹಾಗೂ ಆರೋಗ್ಯ ನಿರ್ದೇಶನಾಲಯದ ಮಿಷನ್ ನಿರ್ದೇಶಕರಾಗಿ ಅಕ್ರಮ್ ಪಾಶಾ ನೇಮಕಗೊಂಡಿದ್ದಾರೆ.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ನಿರ್ದೇಶಕರಾಗಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಬಾಗಲಕೋಟೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಗಜಾನನ ಬಾಳೆ ಅವರನ್ನು ನೇಮಕ ಮಾಡಲಾಗಿದೆ.






































































