ಬೆಂಗಳೂರು: 2ಎ ಮೀಸಲಾತಿಗೆ ಪಂಚಮಸಾಲಿ ಸಮುದಾಯವನ್ನು ಸೇರಿಸುವುದರಿಂದ ಹಿಂದುಳಿದ ವರ್ಗ ಕೆಳ ಸಮುದಾಯಕ್ಕೆ ಹೊಡೆತ ಬೀಳಲಿದೆ. 2ಎ ಮೀಸಲಾತಿ ಯಥಾಸ್ಥಿತಿ ಕಾಪಾಡುವಂತೆ ಆಗ್ರಹಿಸಿ ಇದೇ 17 ರಂದು ಹಿಂದುಳಿದ ವರ್ಗಗಳ ಪ್ರಮುಖರ ಸಭೆಯನ್ನು ಕರೆಯಲಾಗಿದೆ ಎಂದು ನೇಕಾರ ಸಮುದಾಯದ ಹಿರಿಯ ಮುಖಂಡ, ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀ ನಾರಾಯಣ ತಿಳಿಸಿದ್ದಾರೆ.
ಬೆಂಗಳೂರಿನ ಗಾಂಧಿ ಭವನದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಹಿತಾರಕ್ಷಣಾ ಸಂಘ ಇಂದು ಹಮ್ಮಿಕೊಂಡಿದ್ದ 2ಎ ಮೀಸಲಾತಿ ಯಥಾಸ್ಥಿತಿ ಕಾಪಾಡುವಂತೆ ಆಗ್ರಹಿಸಿ ನಡೆದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ, ಮಾತನಾಡಿದ ಅವರು ಇದೇ 17 ರಂದು ಹಿಂದುಳಿದ ವರ್ಗಗಳ ಪ್ರಮುಖರ ಸಭೆಯನ್ನು ಕರೆಯಲಾಗಿದೆ ಈ ಸಭೆಯ ಬಳಿಕ ರಾಜ್ಯದ್ಯಾಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಡಿಸಿದ ಈ ಸಾಲಿನ ಬಜೆಟ್ ನಲ್ಲಿ ಹಿಂದುಳಿದ ಸಮುದಾಯಕ್ಕೆ ಕೇವಲ 500 ಕೋಟಿ ರೂ.ಗಳನ್ನು ನೀಡಿರುವುದನ್ನು ಸರಿಯಲ್ಲ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸುಮಾರು 300ಕ್ಕೂ ಹೆಚ್ಚು ಸಮುದಾಯಗಳು ಬರಲಿದ್ದು, ಕೇವಲ 500 ಕೋಟಿ ರೂ.ಗಳನ್ನು ನೀಡಿರುವುದು ಸರಿಯಲ್ಲ ಎಂದು ಅವರು ತಿಳಿಸಿದರು.
ವೀರಶೈವ ಅನುಭವ ಮಂಟಪಕ್ಕೆ 500 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳು ಬಜೆಟ್‍ನಲ್ಲಿ ಘೋಷಣೆ ಮಾಡಿದ್ದಾರೆ. ಆದರೆ 300ಕ್ಕೂ ಹೆಚ್ಚು ಜಾತಿಗಳನ್ನು ಒಳಗೊಂಡಿರುವ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಕೇವಲ 500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ, 2ಎ ಮೀಸಲಾತಿ ಪಂಚಮಶಾಲಿ ಜನಾಂಗಕ್ಕೆ ಮೀಸಲಾತಿ ನೀಡುವ ಸಂಬಂಧ ಅಧ್ಯಯನಕ್ಕೆ ನ್ಯಾಯಮೂರ್ತಿ ಸುಭಾಷ್ ಅಡಿ ಅವರನ್ನು ನೇಮಕ ಮಾಡಲಾಗಿದ್ದು ಅವರ ಮೇಲೆ ನಮಗೆ ವಿಶ್ವಾಸ ವಿಲ್ಲ ಅವರು ಪಾರದರ್ಶಕವಾಗಿ ವರದಿ ನೀಡುವುದು ಅನುಮಾನವಿದೆ. ಇವರ ನೇಮಕಕ್ಕೆ ವಿರೋಧವಿದೆ ಎಂದು ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಕೆ. ಎಂ. ರಾಮಚಂದ್ರಪ್ಪ ತಿಳಿಸಿದರು.
ಪ್ರಧಾನ ಕಾಯದರ್ಶಿ ಸೈದಪ್ಪ ಗುತ್ತೇದಾರ್ ಮಾತನಾಡಿ ಹಿಂದುಳಿದ ವರ್ಗಗಳ 2ಎ ಪ್ರವರ್ಗದಲ್ಲಿ 362 ಜಾತಿಗಳು ಬರಲಿದ್ದು, ಇದುವರೆಗೂ ಕೇವಲ ಒಂದೆರಡು ಪ್ರಬಲ ಸಮುದಾಯಗಳು ಶೇ. 15 ರಷ್ಟು ಮೀಸಲಾತಿಯಲ್ಲಿ ಲಾಭ ಪಡೆದವರಾಗಿದ್ದಾರೆ. ಹಿಂದುಳಿದ ವರ್ಗದಲ್ಲಿ ಕೆಳ ಸಮುದಾಯಗಳು ಸರ್ಕಾರದ ಸವಲತ್ತು, ಸೌಲಭ್ಯಗಳಿಂದ ವಂಚಿತರಾಗಿ ಹಾಗೇ ಉಳಿದಿದ್ದಾರೆಂದು ತಿಳಿಸಿದರು.
ರಾಜ್ಯದಲ್ಲಿ ಮೀಸಲಾತಿ ಕೂಗು ಎದ್ದಿರುವ ಸಂದರ್ಭದಲ್ಲಿ ಪ್ರಬಲ ಸಮುದಾಯಗಳು 2ಎ ಮೀಸಲಾತಿ ಒಳಗಡೆ ಬರುವುದರಿಂದ ಈಗಾಗಲೇ ಇರುವ ಕೆಳ ಸಮುದಾಯಗಳ ಮೇಲೆ ಪರಿಣಾಮ ಬೀಳಲಿದೆ. ಈ ಬಗ್ಗೆ ನಾವು ಮುಂದಿನ ಹೋರಾಟ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದರು. ಸಭೆಯಲ್ಲಿ ಅಧ್ಯಕ್ಷ ಮಂಜುನಾಥ್ ಲಕ್ಷ್ಮಣ ನಾಯ್ಕ್, ಮತ್ತಿತರರು ಭಾಗವಹಿಸಿದ್ದರು.