ಬೆಂಗಳೂರು: ಮೈಸೂರಿನ ಹಿರಿಯ ಪತ್ರಕರ್ತರು ಹಾಗೂ ಹೆಸರಾಂತ ‘ಮೈಸೂರು ಮಿತ್ರ’ ಮತ್ತು ‘ಸ್ಟಾರ್ ಆಫ್ ಮೈಸೂರು’ ಪತ್ರಿಕೆಗಳ ಸಂಪಾದಕರಾದ ಕೆ.ಬಿ. ಗಣಪತಿಯವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಶ್ರದ್ಧಾಂಜಲಿ ಸಮರ್ಪಿಸಿದೆ.
ವರದಿಗಾರರಾಗಿ, ಉಪಸಂಪಾದಕರಾಗಿ ಪತ್ರಿಕಾರಂಗದಲ್ಲಿ ವೃತ್ತಿ ಜೀವನ ಆರಂಭಿಸಿ, ವಕೀಲರಾಗಿ, ಜಾಹೀರಾತು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ, ಮೈಸೂರು ಕೇಂದ್ರ ಭಾರತೀಯ ವಿದ್ಯಾಭವನದ ಉಪಾಧ್ಯಕ್ಷರಾಗಿ, ಸಂಪಾದಕರಾಗಿ ಹಾಗೂ ಪತ್ರಿಕೆಯ ಮಾಲೀಕರಾಗಿ ಸಮಾಜಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ತಮ್ಮ ಆಕರ್ಷಕ ಅಂಕಣಬರಹಗಳ ಮೂಲಕ ಓದುಗರ ಮನಮುಟ್ಟುತ್ತಿದ್ದ ಅವರು ಪತ್ರಿಕೆಯನ್ನು ಜನರ ದನಿಯಾಗಿ ರೂಪಿಸಿದ್ದಲ್ಲದೆ, ತಮ್ಮ ಗುಣಮಟ್ಟದ ವರದಿಗಳ ಮೂಲಕ ರಾಜ್ಯ ರಾಷ್ಟ್ರ ಮಟ್ಟದಲ್ಲೂ ಗುರುತಿಸುವಂತೆ ಮಾಡಿದವರು.
ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದ ಕೆ.ಬಿ. ಗಣಪತಿಯವರು ಮಂಥನ ವೈಚಾರಿಕ ವೇದಿಕೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹಾಗೂ ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ್ ಜಿ. ಎಸ್. ಉಮಾಪತಿ ಅವರು ನೆನಪಿಸಿದ್ದಾರೆ.
ಕೆ.ಬಿ. ಗಣಪತಿಯವರ ಆತ್ಮಕ್ಕೆ ಸದ್ಗತಿ ದೊರಕಲಿ ಹಾಗೂ ಬಂಧುಬಳಗಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.







































































