ನವದೆಹಲಿ: ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಕುಟುಂಬಗಳ ವಾರ್ಷಿಕ ಆದಾಯ ₹5 ಲಕ್ಷದವರೆಗೆ ಇದ್ದರೆ, ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ₹3.5 ಲಕ್ಷದವರೆಗೆ ಆರ್ಥಿಕ ನೆರವು ಪಡೆಯಬಹುದು ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ತಿಳಿಸಿದೆ.
ಡಾ. ಅಂಬೇಡ್ಕರ್ ಫೌಂಡೇಶನ್ ಮೂಲಕ ಜಾರಿಗೊಳಿಸಿರುವ ಪರಿಷ್ಕೃತ ವೈದ್ಯಕೀಯ ನೆರವು ಯೋಜನೆಯಡಿ ಹೃದಯ, ಮೂತ್ರಪಿಂಡ, ಕ್ಯಾನ್ಸರ್, ಮೆದುಳು ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ಸೇರಿದಂತೆ ಜೀವಕ್ಕೆ ಅಪಾಯಕಾರಿಯಾದ ಕಾಯಿಲೆಗಳ ಚಿಕಿತ್ಸೆಗೆ ನೆರವು ನೀಡಲಾಗುತ್ತದೆ.

2026ರ ಜೂನ್ 2ರಂದು ಅಧಿಸೂಚಿಸಲಾದ ಮಾರ್ಗಸೂಚಿಗಳ ಪ್ರಕಾರ, ನಿಗದಿತ ಮಿತಿಯೊಳಗೆ ಚಿಕಿತ್ಸಾ ವೆಚ್ಚದ ಶೇ.100ರಷ್ಟು ಹಣವನ್ನು ನೇರವಾಗಿ ಆಸ್ಪತ್ರೆಗೆ ಪಾವತಿಸಲಾಗುತ್ತದೆ. ಮೂತ್ರಪಿಂಡ ಶಸ್ತ್ರಚಿಕಿತ್ಸೆ, ಡಯಾಲಿಸಿಸ್ ಮತ್ತು ಅಂಗಾಂಗ ಕಸಿಗೆ ಗರಿಷ್ಠ ₹3.5 ಲಕ್ಷ, ಕ್ಯಾನ್ಸರ್ ಚಿಕಿತ್ಸೆಗೆ ₹2.5 ಲಕ್ಷ, ಮೆದುಳಿನ ಶಸ್ತ್ರಚಿಕಿತ್ಸೆಗೆ ₹2 ಲಕ್ಷ ಹಾಗೂ ಹೃದಯ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ₹1.5 ಲಕ್ಷ ನೆರವು ಲಭ್ಯವಿದೆ.
ಅರ್ಜಿ ಸಲ್ಲಿಸಲು ಆದಾಯ ಮತ್ತು ಜಾತಿ ಪ್ರಮಾಣಪತ್ರ, ಪಡಿತರ ಚೀಟಿ ಅಥವಾ ಆಧಾರ್, ಭಾವಚಿತ್ರ ಹಾಗೂ ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಅಂದಾಜು ಸಲ್ಲಿಸಬೇಕು. ಚಿಕಿತ್ಸೆ ಆರಂಭಕ್ಕೆ ಕನಿಷ್ಠ 15 ದಿನಗಳ ಮೊದಲು ಅರ್ಜಿ ಡಾ. ಅಂಬೇಡ್ಕರ್ ಫೌಂಡೇಶನ್‌ಗೆ ತಲುಪಬೇಕು.















































































