ಬೆಂಗಳೂರು: ರಾಜ್ಯದಲ್ಲಿ ದೊರೆಯುವ 758 ಸೇವೆಗಳಲ್ಲಿ ಬಹುತೇಕ ಸೇವೆಗಳಿಗೆ ಸಾರ್ವಜನಿಕರಿಂದ ಸಕಾಲ ಯೋಜನೆಯಲ್ಲಿ ಕೋರಿಕೆಗಳೇ ಲಭ್ಯವಾಗಿಲ್ಲ ಎಂಬುದನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶ್ ಕುಮಾರ್, ಈ ಕುರಿತು ಅಧಿಕಾರಿಗಳು ಸಾರ್ವಜನಿಕ ಸೇವೆಗಳನ್ನು ಬೈಪಾಸ್ ಮಾಡುತ್ತಿದ್ದಾರೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳೊಂದಿಗೆ ಸಕಾಲ ಯೋಜನೆ ಅನುಷ್ಠಾನ ಪ್ರಗತಿ ಪರಿಶೀಲನೆ ಮತ್ತು ಸಕಾಲ ಸೇವೆಗಳಲ್ಲಿ ಸಾಧನೆ ಮಾಡಿರುವ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ಪ್ರಮಾಣ ಪತ್ರ ಮತ್ತು ಬಹುಮಾನಗಳನ್ನು ವಿತರಿಸಿ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಮಾತನಾಡಿದ ಅವರು, ಕ್ಲುಪ್ತ ಸಮಯದಲ್ಲಿ ಸಾರ್ವಜನಿಕರಿಗೆ ನಾಗರೀಕ ಸೇವೆಗಳು ದೊರೆಯುವಂತಾಗಲು ಸಕಾಲ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕಾಗಿ ಜಿಲ್ಲಾ ಮಟ್ಟದಲ್ಲಿನ ಅನುಷ್ಠಾನ ಸಮಿತಿಗಳ ಮೂಲಕ ಈ ಕುರಿತು ತೀವ್ರ ನಿಗಾ ಇಡಲಾಗುವುದು ಎಂದರು.
ಸಕಾಲ ಯೋಜನೆ ಮೂಲಕ ಸೇವೆಗಳನ್ನು ಒಗಿಸಲು ಅಧಿಕಾರಿಗಳು ಮತ್ತು ಸಮಿತಿಗಳು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಈ ಕುರಿತು ರಾಜ್ಯಮಟ್ಟದಿಂದ ತೀವ್ರ ನಿಗಾ ಇಡಲಾಗುವುದು. ಸಕಾಲ ಯೋಜನೆಯಡಿ ಜಿಲ್ಲಾವಾರು ಪ್ರಗತಿ ಪರಿಶೀಲಿಸಲು ಮತ್ತು ಎಷ್ಟು ಸಂಖ್ಯೆಯ ಸೇವೆಗಳಿಗೆ ಕೋರಿಕೆ ಲಭ್ಯವಾಗಿದೆ ಎಂಬ ಕುರಿತು ತಾವೇ ಪ್ರತಿ 15 ದಿನಗಳಿಗೊಮ್ಮೆ ಸ್ವತಃ ಪರಿಶೀಲನೆ ಮಾಡುವುದಾಗಿ ತಿಳಿಸಿದ ಸಚಿವರು, ಈ ಕುರಿತು ಜಿಲ್ಲಾ ಮಟ್ಟದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಎಲ್ಲ ಸೇವೆಗಳನ್ನು ಸಕಾಲ ಯೋಜನೆಯಡಿಯಿಂದಲೇ ನೀಡುವ ಕುರಿತು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದರು.
ಕೆಲ ಕಚೇರಿಗಳಲ್ಲಿ ಸಕಾಲ ಯೋಜನೆಯಡಿ ಸೇವೆಗಳಿಗೆ ಶೂನ್ಯ ಅರ್ಜಿ ಸಲ್ಲಿಕೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸುರೇಶ್ ಕುಮಾರ್, ಸಾರ್ವಜನಿಕರು ಈ ಕಚೇರಿಗಳಿಗೆ ಯಾವುದೇ ಸೇವೆಗೆ ಬಂದಿಲ್ಲವೆಂದು ಪರಿಗಣಿಸಬೇಕೇ ಅಥವಾ ನಿಗದಿತ ಸಮಯದಲ್ಲಿ ಸೇವೆ ಒದಗಿಸಲು ಬಯಸದ ಅಧಿಕಾರಿಗಳು ಸಕಾಲ ಯೋಜನೆಯಡಿ ಅರ್ಜಿ ಪಡೆಯದೇ ಭೌತಿಕವಾಗಿ ಅರ್ಜಿ ಸ್ವೀಕರಿಸಿ ಸಕಾಲ ಯೋಜನೆಯ ಸೇವೆಗಳನ್ನು ಬೈಪಾಸ್ ಮಾಡಲಾಗುತ್ತಿದೆಯೇ ಎಂಬ ಕುರಿತು ಅನುಮಾನ ವ್ಯಕ್ತವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಕಾಲ ಯೋಜನೆ ಮೂಲಕ ಸರ್ಕಾರದ ಎಲ್ಲ ಸೇವೆಗಳನ್ನು ನೀಡುವುದನ್ನು ಮತ್ತು ದೊರೆಯುವುದನ್ನು ಖಾತರಿಪಡಿಸಲು ಹಾಗೆಯೇ ಜಿಲ್ಲೆಗಳು ಮತ್ತು ತಾಲೂಕುವಾರು ಪರಿಶೀಲನೆಯಲ್ಲಿ ವಿಳಂಬ ಸೇವೆ ಮತ್ತು ತಿರಸ್ಕೃತ ಅರ್ಜಿಗಳ ಶೇಕಡವಾರು ಹೆಚ್ಚಿನ ಪ್ರಕರಣಗಳು ಕಂಡುಬರುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಸೂಕ್ತ ಸಮಯದಲ್ಲಿ ಸೇವೆ ದೊರೆಯುತ್ತಿಲ್ಲ ಎಂಬ ಅಂಶ ವ್ಯಕ್ತವಾಗುತ್ತಿದೆ. ಇದನ್ನು ಜಿಲ್ಲಾಮಟ್ಟದಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಎರಡು ಸಮಿತಿಗಳನ್ನು ರಚಿಸಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚಿಸಿ ಪ್ರತಿ ಸೋಮವಾರ ನಿಗದಿತ ನಮೂನೆಯಲ್ಲಿ ಸಕಾಲ ಮಿಷನ್ ಗೆ ವರದಿ ಸಲ್ಲಿಸುವುದು. ಹಾಗೆಯೇ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲು ಪರಿಶೀಲನಾ ತಂಡಗಳನ್ನು ರಚಿಸಿ ಪ್ರತಿ ಶನಿವಾರ ವಿಳಂಬ ವಿಲೇವಾರಿ ಮತ್ತು ತಿರಸ್ಕೃತ ಕಾರಣಗಳನ್ನು ಪರಿಶೀಲಿಸಲು ಕ್ರಮ ವಹಿಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.
ನಾಗರಿಕರಿಗೆ ಸಕಾಲದ ಮೂಲಕ ನಿಗದಿತ ಸಮಯದಲ್ಲಿ ತೃಪ್ತಿ ಮತ್ತು ಸಮಾಧಾನ ಅಂಶಗಳು ಸಕಾಲ ಸೇವೆಗಳ ಮಾನದಂಡವಾಗಬೇಕಿದೆ. ಸಕಾಲದ ಮಹತ್ವವನ್ನು ಅಧಿಕಾರಿಗಳು ಮತ್ತು ನೌಕರರು ಅರ್ಥ ಮಾಡಿಕೊಳ್ಳುವುದರೊಂದಿಗೆ ಮಹೋನ್ನತ ಉದ್ದೇಶ ಹೊಂದಿರುವ ಈ ಯೋಜನೆಯ ಸೌಲಭ್ಯದ ಸಮಾಧಾನ ಜನತೆಗೆ ದೊರೆಯಬೇಕು. ಈ ನಿಟ್ಟಿನಲ್ಲಿ ನಮ್ಮ ಆಡಳಿತ ವ್ಯವಸ್ಥೆ ಕೆಲಸ ಮಾಡಬೇಕು ಎಂದು ಸಚಿವರು ಸಲಹೆ ನೀಡಿದರು.
ಇನ್ನು ಈ ರೀತಿಯ ಸಕಾಲ ಯೋಜನೆಯಡಿ ಸೇವೆಗಳ ನಿರ್ಲಕ್ಷ್ಯವನ್ನು ಸಹಿಸಿಕೊಳ್ಳಲಾಗದು ಎಂದು ಸಚಿವರು, ಸಕಾಲ ಯೋಜನೆಯನ್ನು 2012ರಲ್ಲಿ ಜಾರಿಗೆ ತಂದ ತಮ್ಮ ಅಂದಿನ ಉದ್ದೇಶ ಮತ್ತು ಪ್ರಸಂಗವನ್ನು ವಿವರಿಸಿ, ಯಾವುದೇ ಕಾರಣಕ್ಕೂ ಈ ರೀತಿಯ ನಿರ್ಲಕ್ಷ್ಯವನ್ನು ಅಧಿಕಾರಿಗಳು ಮುಂದುವರೆಸದಂತೆ ತಾಕೀತು ಮಾಡಿದರು.
ಸಕಾಲ ಯೋಜನೆ ಕುರಿತು ಸಾರ್ವಜನಿಕರಲ್ಲಿ ಪ್ರಜ್ಞೆ ಮೂಡಿದೆಯಾದರೂ ಅದು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ. ಅದಕ್ಕಾಗಿ ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಸಕಾಲ ಕುರಿತು ಜಾಗೃತಿ ಮೂಡಿಸಲು ಪತ್ರಿಕಾ ಹೇಳಿಕೆ, ಪತ್ರಿಕಾಗೋಷ್ಠಿಗಳ ಮೂಲಕ ಕ್ರಮ ವಹಿಸಬೇಕು. ಹಾಗೆಯೇ ಪ್ರತಿ ಸರ್ಕಾರಿ ಕಚೇರಿ ಮುಂದೆ ಸಕಾಲ ಫಲಕಗಳನ್ನು ಅಳವಡಿಸಬೇಕು. ಸಕಾಲ ಮೂಲಕ ಅರ್ಜಿ ಸಲ್ಲಿಸಿದಾಗ ಅದರ ಸೇವೆ ನಿಗದಿತ ಅವಧಿಯಲ್ಲಿ ದೊರೆಯದೇ ಹೋದರೆ ಆ ಕುರಿತು ಮೇಲ್ಮನವಿ ಸಲ್ಲಿಸಿ ತನಗೆ ಸೇವೆ ಸಕಾಲದಲ್ಲಿ ದೊರೆಯದ ಕುರಿತು ಮೇಲ್ಮನವಿ ಸಲ್ಲಿಸಿ ನ್ಯಾಯ ಪಡೆಯುವ ಹಕ್ಕು ಸಾರ್ವಜನಿಕರಿಗೆ ಇದೆ ಎಂಬುದನ್ನು ಅಧಿಕಾರಿಗಳು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಚಿವರು ಸಲಹೆ ನೀಡಿದರು.