ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಹೊರಗಡೆ ಹೋಗೋ ಹಾಗಿಲ್ಲ. ಮನೆಯಲ್ಲೇ ಕುಳಿತು ಬೋರೋ ಬೋರು. ಏನಾದರೂ ಹೊಸತು ಮಾಡಮ್ಮ ಅಂತ ಕಿರಿಕ್ ಮಾಡ್ತಾ ಇದ್ದಾನೆ ಮಗ ಅಂತ ತಂಗಿ ಫೋನ್ ಮಾಡಿದ್ಳು. ತರಕಾರಿ ದುಬಾರಿ. ಲಾಕ್ಡೌನ್ ಸಮಯದಲ್ಲಿ ನಾವು ಬಹಳ ಚ್ಯೂಸಿಯಾಗಿ ಬಳಸ ಬೇಕಾದ ಅನಿವಾರ್ಯತೆ. ಹಾಗಾಗಿ ಇದ್ದ ಸಾಮಾನುಗಳನ್ನು ಬಳಸಿ ಮಾಡುವ ಮಂಚೂರಿಯನ್’ಗಳನ್ನು ತಿಳಿಸಿಕೊಟ್ಟೆ.. ಬನ್ನಿ ನೀವು ಮಾಡಿ ನೋಡಿ.
ಪುಂಡಿ (ಅಕ್ಕಿಮುದ್ದೆ) ಮಂಚೂರಿಯನ್
1 ಕಪ್ ಅಕ್ಕಿ ತರಿ, ಶುಂಠಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ನೀರುಳ್ಳಿ 1,ಕ್ಯಾಪ್ಸಿಕಂ ( ಇದ್ದರೆ) ಟೊಮ್ಯಾಟೊ ಕೆಚಪ್, ಸೋಯ ಸಾಸ್, ಉಪ್ಪು, ಸಕ್ಕರೆ, ಅರಶಿನ, ಮೆಣಸಿನ ಹುಡಿ ರುಚಿಗೆ, ಕೊತ್ತಂಬರಿ ಸೊಪ್ಪು ಅಥವಾ ಬೇವಿನ ಸೊಪ್ಪು. ಎರಡು ಚಮಚ ಜೋಳದ ಹುಡಿ.
ಮಾಡುವ ವಿಧಾನ..
- ಅಕ್ಕಿತರಿಯ ಮೂರುಪಟ್ಟು ನೀರು ಕುದಿಯಲು ಇಡ ಬೇಕು.
- ಕುದಿಯುವ ನೀರಿಗೆ ಉಪ್ಪು, ಚೂರು ಅರಶಿನ, ಮೆಣಸಿನಹುಡಿ, ಬೆಳ್ಳುಳ್ಳಿ ಪೇಸ್ಟ್, ಶುಂಠಿ ಪೇಸ್ಟ್ ಹಾಕ ಬೇಕು.
- ಅದಕ್ಕೆ ಅಕ್ಕಿ ತರಿ ಹಾಕಿ ಚೆನ್ನಾಗಿ ಮಗುಚ ಬೇಕು. ಆ ಹಿಟ್ಟನ್ನು ಸಣ್ಣ ಸಣ್ಣ ಉಂಡೆ ಮಾಡಿ ಹಬೆಯಲ್ಲಿ ಬೇಯಿಸ ಬೇಕು.
- ಬಾಣಲೆಯಲ್ಲಿ ನೀರುಳ್ಳಿ ಹುರಿದುಕೊಂಡು, ಅದಕ್ಕೆ ಕ್ಯಾಪ್ಸಿಕಂ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಾಕಿ ಹುರಿಯ ಬೇಕು. ಸಿಹಿ ಬೇಕಿದ್ದರೆ ಸಕ್ಕರೆ ಬಳಸಬಹುದು.
- ಅದಕ್ಕೆ ಟೊಮ್ಯಾಟೊ ಕೆಚಪ್, ಸೋಯಸಾಸ್ ಹಾಕಿ ಮಗುಚಬೇಕು.
- ಅದಕ್ಕೆ ಜೋಳದ ಹುಡಿಯನ್ನು ದೋಸೆ ಹಿಟ್ಟಿನಂತೆ ತೆಳ್ಳಗೆ ನೀರು ಮಾಡಿ ಹಾಕಿ ಬೇಯಿಸ ಬೇಕು.
- ಅಕ್ಕಿ ಉಂಡೆಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಬೇವಿನ ಸೊಪ್ಪು ಅಥವಾ ಕೊತ್ತಂಬರಿ ಸೊಪ್ಪು ಹಾಕಿದರೆ ರೈಸ್ ಬಾಲ್ ಮಂಚೂರಿಯನ್ ಮತ್ತಷ್ಟು ಟೇಸ್ಟೀ.!!