ರಾಯಚೂರು: ರಾಜ್ಯದಲ್ಲಿನ ಉಪಚುನಾವಣಾ ಅಖಾಡದಲ್ಲಿ ಪ್ತಚಾರ ಭರಾಟೆ ಜೋರಾಗಿದೆ. ಆಡಳಿತಾರೂಢ ಬಿಜೆಪಿ ಈ ಅಖಾಡದಲ್ಲಿ ಪ್ರತಿಷ್ಠೆಯನ್ನು ಪಣವಾಗಿಟ್ಟು ಮತಬೇಟೆಯಲ್ಲಿ ನಿರತವಾಗಿದೆ.
ಪ್ರಚಾರದ ಅಖಾಡದಲ್ಲಿ ನಿರಂತರ ಸವಾರಿ ಕೈಗೊಂಡಿರುವ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಇಂದು ಮಸ್ಕಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತಬೇಟೆ ಕೈಗೊಂಡರು. ನಾಗರಬೆಂಚಿ, ಮೆದಿರೆನಳ್ಳ, ಬಗ್ಗಲಗುಡ್ಡ, ಯರದೊಡ್ಡಿ, ದೇಸಾಯಿ ಬೇಗಾಪುರ ಗ್ರಾಮಗಳಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ ಪರವಾಗಿ ಚುನಾವಣಾ ಪ್ರಚಾರ ನಡೆಸಿದರು.
ಮಸ್ಕಿ ಮೀಸಲು ವಿಧಾನ ಸಭಾ ಕ್ಷೇತ್ರಕ್ಕೆ ಇದೇ ಎಪ್ರಿಲ್ 17 ರಂದು ಉಪಚುನಾವಣೆ ನಡೆಯಲಿದೆ. ಗ್ರಾಮಗಳಿಗೆ ಪ್ರಚಾರಕ್ಕೆ ತೆರಳಿದ ವೇಳೆ ಸಚಿವರು ಯಡಿಯೂರಪ್ಪ ನೇತೃತ್ವದ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಗಮನಸೆಳೆದರು. ಉತ್ತರ ಕರ್ನಾಟಕ ಭಾಗದ ಮೇಲೆ ಯಡಿಯೂರಪ್ಪ ಹೆಚ್ಚು ಗಮನ ಹರಿಸಿರುವ ಬಗ್ಗೆ ಬೆಳಕುಚೆಲ್ಲಿದರು.
ಮಸ್ಕಿ ಕ್ಷೇತ್ರದ ಅಭಿವೃದ್ಧಿಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಸಚಿವ ಬಸವರಾಜ್ ಮನವಿ ಮಾಡಿದರು. ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮಾನ್ಯ ಸಚಿವರೊಂದಿಗೆ ಮನೆಮನೆಗೆ ತೆರಳಿ ಮತ ಮತಯಾಚನೆ ಮಾಡಿದರು.