ಬೆಂಗಳೂರು: ರಾಜ್ಯದ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಅಳವಡಿಕೆ ಹಾಗೂ ಅರವಳಿಕೆ ತಜ್ಞರ ನೇಮಕಕ್ಕೆ ಸೂಚಿಸಲಾಗಿದೆ. ಒಟ್ಟು 2,480 ವೈದ್ಯರ ನೇಮಕವೂ ಶೀಘ್ರ ಆಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನ ಕೆ.ಆರ್.ಪುರ, ಹೊಸಕೋಟೆ, ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ, ಮೂಲಸೌಕರ್ಯವನ್ನು ಸಚಿವರು ಪರಿಶೀಲಿಸಿದರು. ಕಳೆದ ಆರೇಳು ತಿಂಗಳಲ್ಲಿ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ 50 ಆಕ್ಸಿಜನ್ ಹಾಸಿಗೆ, ಆರು ವೆಂಟಿಲೇಟರ್ ಅಳವಡಿಸಲಾಗಿದೆ. ಕೆಲವೆಡೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಅದಕ್ಕಾಗಿ ಸೂಚನೆ ನೀಡಲಾಗಿದೆ. ಅರವಳಿಕೆ ತಜ್ಞರು, ಫಿಸಿಶಿಯನ್ ಇಲ್ಲದ ಕಡೆ ತಾತ್ಕಾಲಿಕ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. 720 ತಜ್ಞರನ್ನು ನೇರ ನೇಮಕ ಸೇರಿ ಒಟ್ಟು 2,480 ವೈದ್ಯರನ್ನು ನೇರ ನೇಮಕ ಮಾಡುವ ಪ್ರಕ್ರಿಯೆ ನಡೆದಿದೆ ಎಂದರು.
ಬೆಂಗಳೂರು ನಗರದಲ್ಲಿ ಕೋವಿಡ್ ಹತೋಟಿಗೆ ಬರಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಏರಿಕೆ ಹಾಗೂ ನಿಯಂತ್ರಣ ಕುರಿತು ಚರ್ಚಿಸಲಾಗಿದೆ. ಬೇರೆ ಜಿಲ್ಲೆಗಳಲ್ಲಿ ಲಭ್ಯವಿರುವ ಮೂಲಸೌಕರ್ಯ ಬಳಸಿಕೊಂಡು ಸೇವೆ ನೀಡಬೇಕಿದ್ದು, ಈಗಿನಿಂದಲೇ ಸಿದ್ಧತೆಗೆ ಸೂಚಿಸಲಾಗಿದೆ ಎಂದರು.
ಹೊಸಕೋಟೆಯ ಎಂವಿಜೆ ಆಸ್ಪತ್ರೆಗೆ 10 ವೆಂಟಿಲೇಟರ್ ನೀಡಲಾಗಿದೆ. ಇನ್ನೂ 10 ವೆಂಟಿಲೇಟರ್ ಕೇಳಿದ್ದು, ಅದನ್ನೂ ಕಳುಹಿಸಿಕೊಡಲಾಗುವುದು. ಹೊಸದಾಗಿ 115 ಹಾಸಿಗೆಯ ಸ್ಟೆಪ್ ಡೌನ್ ಆಸ್ಪತ್ರೆ ನಿರ್ಮಿಸಿ ಕೋವಿಡ್ ರೋಗಿಗಳಿಗೆ ಆರೈಕೆ ನೀಡಲು ನಿರ್ಧರಿಸಲಾಗಿದೆ. ರೋಗಿಗಳು ತಡವಾಗಿ ಆಸ್ಪತ್ರೆಗೆ ಬರುವುದರಿಂದ ಸಾವಿನ ಪ್ರಮಾಣ ಹೆಚ್ಚಾಗಿದೆ. ವರದಿ ಬಂದ ಕೂಡಲೇ ತಕ್ಷಣ ಚಿಕಿತ್ಸೆ ನೀಡಬೇಕು. ಟಾಸ್ಕ್ ಫೋರ್ಸ್ ಪ್ರತಿ ದಿನ ಮನೆಗೆ ಭೇಟಿ ನೀಡಿ ರೋಗಿಗಳ ಪರಿಸ್ಥಿತಿ ಪರೀಕ್ಷಿಸಬೇಕು ಎಂದು ಸೂಚಿಸಲಾಗಿದೆ ಎಂದರು. ಹೊಸಕೋಟೆಯ ತಾಲೂಕು ಆಸ್ಪತ್ರೆಯಲ್ಲಿ 60 ಹಾಸಿಗೆ ಇದ್ದು, 40 ಅನ್ನು ಆಕ್ಸಿಜನ್ ಹಾಸಿಗೆ ಮಾಡಲಾಗಿದೆ. ಔಷಧಿ ಕೊರತೆ ಕಂಡುಬಂದರೆ, ಸ್ಥಳೀಯವಾಗಿಯೇ ಖರೀದಿಸಿ ತಕ್ಷಣ ಪೂರೈಸಲಾಗುತ್ತದೆ ಎಂದರು.
ಚಿಕ್ಕಬಳ್ಳಾಪುರದಲ್ಲಿ 16 ಆಂಬ್ಯುಲೆನ್ಸ್ ಇದ್ದು, ಇನ್ನೂ 15 ಪಡೆಯಲು ಸೂಚಿಸಲಾಗಿದೆ. ಪ್ರತಿ ತಾಲೂಕಿನಲ್ಲಿ 5-6 ಆಂಬ್ಯುಲೆನ್ಸ್ ಇರಬೇಕು. ಖಾಸಗಿ ಆಸ್ಪತ್ರೆಯ 112 ಆಕ್ಸಿಜನ್ ಹಾಸಿಗೆಗಳನ್ನು ಜಿಲ್ಲೆಯ ಜನರಿಗೆ ಮೀಸಲಿಡಲಾಗುತ್ತಿದೆ. ಚಿಂತಾಮಣಿಯಲ್ಲಿ 25% ಪಾಸಿಟಿವಿಟಿ ದರ ಇದೆ. ಇಲ್ಲಿ ಸಾವಿನ ಪ್ರಮಾಣ ಇಳಿಸುವುದು ಮುಖ್ಯ. ಬೂತ್ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಮನೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ಸ್ಥಿತಿ ಪರೀಕ್ಷಿಸುತ್ತಿದ್ದಾರೆ ಎಂದರು.
ಚಿಕ್ಕಬಳ್ಳಾಪುರದಲ್ಲಿ 10 ಸಾವಿರ ಜನರಿಗೆ ಆಗುವಷ್ಟು ಕೋವಿಡ್ ಕೇರ್ ಸೆಂಟರ್ ಗುರುತಿಸಿದ್ದರೂ ರೋಗಿಗಳು ಹೆಚ್ಚು ಬರುತ್ತಿಲ್ಲ. ಮನೆಯಲ್ಲೇ ಆರೈಕೆ ಮಾಡಿಕೊಳ್ಳುತ್ತಿದ್ದಾರೆ. ಚಿಂತಾಮಣಿಗೆ ಒಂದು ಆಕ್ಸಿಜನ್ ಘಟಕ ಮಂಜೂರಾಗಿದೆ. ಸಿಎಸ್ ಆರ್ ಅನುದಾನದಡಿ, ಜಿಲ್ಲಾ ಕೇಂದ್ರಕ್ಕೆ ಒಂದು ಆಕ್ಸಿಜನ್ ಜನರೇಟರ್ ಬರಲಿದೆ. ಗೌರಿಬಿದನೂರಿನಲ್ಲಿ ಒಂದು ಘಟಕ, ಬಾಗೇಪಲ್ಲಿಯಲ್ಲಿ ಒಂದು ಘಟಕ ಬರಲಿದೆ ಎಂದವರು ತಿಳಿಸಿದರು.